ಆನಂತರ ಕೌಶಿಕನು ತನ್ನ ಮೂಲ ಉದ್ದೇಶವಾಗಿದ್ದ ಬ್ರಹ್ಮಶ್ರೀ ಪದವಿ ಪಡೆಯುವ ಸಲುವಾಗಿ ಮತ್ತಷ್ಟು ಉಗ್ರವಾದ ತಪಸ್ಸನ್ನು ಮಾಡತೊಡಗಿದನು ದೀರ್ಘವಾದ ಅವನ ತಪಸ್ಸಿನಿಂದ ಸಂತುಷ್ಟರಾದ ಬ್ರಹ್ಮಾದಿ ದೇವತೆಗಳು ಅವನಿಗೆ ಋಷಿ ಪದವಿಯನ್ನು ದಯಪಾಲಿಸಿದರು ಆದರೆ ಕೌಶಿಕನ ಮನಸ್ಸಿಗೆ ತೃಪ್ತಿಯಾಗಲಿಲ್ಲ ಅವನು ಮತ್ತೆ ಘೋರವಾದ ತಪಸ್ಸಿಗೆ ತೊಡಗಿದನು.
ಕೌಶಿಕ ತಪಸ್ಸಿಗೆ ಆರಂಭಿಸಿದರೆ ದೇವತೆಗಳಿಗೆ ಹೆದರಿಕೆ.ತಮಗೆ ಮತ್ತೆ ತೊಂದರೆ ಆಗಬಹುದೆಂಬ ಭಯ ಅವರಿಗೆ. ಹೇಗಾದರೂ ಸರಿ ಕೌಶಿಕನು ತಪಸ್ಸು ನಿಲ್ಲಿಸುವಂತೆ ಮಾಡಬೇಕೆಂದು ಯೋಚಿಸಿದರು. ಮೇನಕೆ ಎಂಬ ಸುಂದರ ಅಪ್ಸರೆಯನ್ನು ಕೌಶಿಕ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಕಳುಹಿಸಿದರು.
ಮೇನಕೆ ಪುಷ್ಕರ ತೀರ್ಥಕ್ಕೆ ಬಂದಳು. ತಪಸ್ಸು ಮಾಡುತ್ತಿದ್ದ ಕೌಶಿಕನ ಮುಂದೆ ಮನೋಹರವಾಗಿ ನರ್ತನ ಮಾಡಲಾರಂಭಿಸಿದಳು. ಅವಳ ಗೆಜ್ಜೆಯ ಇಂಪಾದ ಧ್ವನಿ ಕೇಳಿ ಕೌಶಿಕ ಕಣ್ಣು ಬಿಟ್ಟ. ಎದುರಿಗೆ ನರ್ತಿಸುತ್ತಿದ್ದ ಮೇನಕೆಯನ್ನು ನೋಡಿದ. ಅವಳ ಸೌಂದರ್ಯವನ್ನು ಕಂಡು ಬೆರಗಾದ. ಅವಳನ್ನು ಪ್ರೀತಿಸಿದ ‘ನನ್ನೊಡನೆ ಸಂಸಾರ ಮಾಡು ಬಾ ಎಂದು ಆಹ್ವಾನಿಸಿದ. ಅವಳು ಒಪ್ಪಿ ಅವನ್ನೊಡನೆ ಸಂಸಾರ ಹೂಡಿದಳು.
ಹೀಗೆಯೇ ಹತ್ತು ವರ್ಷಗಳು ಕಳೆದುಹೋದವು. ಅಷ್ಟರಲ್ಲಿ ಮೇನಕೆಯು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಅವಳೇ ಶಕುಂತಲೆ. ಮುಂದೆ ದುಷ್ಯಂತನನ್ನು ಮದುವೆಯಾಗಿ ಭರತನಿಗೆ ಜನ್ಮ ನೀಡಿದಳು.
ಕೌಶಿಕನಿಗೆ ಜ್ಞಾನೋದಯವಾಯಿತು. ‘ಅಯ್ಯೋ! ಕಾಮ ಪರವಶನಾಗಿ ತಪಸ್ಸನ್ನೇ ಮರೆತನಲ್ಲಾ’ ಎಂದು ದುಃಖಿತನಾದನು.ಪಕ್ಕದಲ್ಲೇ ಹೆದರಿ ನಿಂತಿದ್ದ ಮೇನಕೆಯನ್ನು
ಮೃದು ಮಾತುಗಳಿಂದ ಸಂತೈಸಿ ಕಳುಹಿಸಿಕೊಟ್ಟನ್ನು. ನಂತರ ಉತ್ತರ ದಿಕ್ಕಿನಲ್ಲಿರುವ ಹಿಮಾಲಯ ಪರ್ವತದ ಕಡೆಗೆ ಹೊರಟನು.
ಹಿಮಾಲಯದ ಬಳಿ ಕೌಶಕೀ ನದಿಯ ತೀರದಲ್ಲಿ ಕುಳಿತು ಕೌಶಿಕನು ದಾರುಣವಾದ ತಪಸ್ಸನ್ನು ಪ್ರಾರಂಭಿಸಿದನು.
ಅವನ ದೀರ್ಘ ತಪಸ್ಸಿಗೆ ಸಂತಸ ಗೊಂಡ ಬ್ರಹ್ಮದೇವರು ಋಷಿಗಳಿಗೆ ಮುಖ್ಯವಾದ ‘ಮಹರ್ಷಿ’ ಪದವಿಯನ್ನು ಅನುಗ್ರಹಿಸಿದರು. ಆದರೆ ಕೌಶಿಕನು ತೃಪ್ತನಾಗದೆ ತನ್ನ ತಪಸ್ಸನ್ನು ಮತ್ತೆ ಮುಂದುವರಿಸಿದನು. ಎರಡು ಕೈಗಳನ್ನು ಮೇಲೆತ್ತಿನಿಂತನು. ಗಾಳಿಗೆ ಅವನ ಆಹಾರವಾಯಿತು. ಬೇಸಿಗೆಯ ಸುಡು ಬಿಸಿಲು, ಮಳೆಗಾಲದ ಧಾರಾಕಾರವಾದ ವರ್ಷ, ಚಳಿಗಾಲದಲ್ಲಿ ಗದಗುಟ್ಟಿ ನಡುಗಿಸುವ ಚಳಿ – ಯಾವುದು ಅವನ ತಪಸ್ಸನ್ನು ಕುಗ್ಗಿಸಲಿಲ್ಲ.
ಕೌಶಿಕನ ಈ ಘೋರ ತಪಸ್ಸಿನಿಂದ ಭಯಪಟ್ಟ ದೇವತೆಗಳು ರಂಬೆ ಎಂಬ ಇನ್ನೊಬ್ಬ ಸುಂದರ ಅಪ್ಸರೆಯನ್ನು ಆವನ ಬಳಿಗೆ ಕಳುಹಿಸಿದರು. ಆದರೆ ಕಾಮ ಮೋಹಗಳನ್ನು ಗೆದ್ದು ಜಿತೇಂದ್ರಿಯನಾಗಿದ್ದ ಕೌಶಿಕನು ರಂಭೆಯ ಕಡೆ ಕಿರುಗಣ್ಣನ್ನು ಸಹ ತಿರುಗಿಸಲಿಲ್ಲ. ನನ್ನ ತಪಸ್ಸು ಕೆಡಿಸುವ ಯತ್ನ ಮಾಡಿದ ರಂಬೆಗೆ ಶಾಪ ಕೊಟ್ಟು ಅವನು ತನ್ನ ಸಾಧನೆಯನ್ನು ಮುಂದುವರೆಸಿದ. ಮೌನ ವ್ರತವನ್ನು ತಾಳಿದ. ಆಹಾರ ನಿದ್ರೆಗಳನ್ನು ಬಿಟ್ಟ. ಮರದ ಕೊರಡಿನಂತೆ ನಿಶ್ಚಲವಾಗಿ ಇದ್ದುಬಿಟ್ಟ. ಕೊನೆ ಕೊನೆಗೆ ಅವನ ತಪಸ್ಸು ಇನ್ನೂ ಘೋರವಾಯಿತು. ಅವನ ತಲೆಯಿಂದ ಹೋಗೆ ಹೊರಟಿತು. ಆ ಮಹಾಜ್ವಾಲೆಯಿಂದ ಇಡೀ ಲೋಕವೇ ತಲ್ಲಣಗೊಂಡಿತು.
ಆಗ ದೇವತೆಗಳೆಲ್ಲ ಬ್ರಹ್ಮದೇವರ ಬಳಿಗೆ ಹೋದರು. “ದೇವ! ಕೌಶಿಕನ ಇಚ್ಛೆಯನ್ನು ಈಡೇರಿಸಬೇಕು”ಎಂದರು. ಬ್ರಹ್ಮದೇವರು ಕೌಶಿಕನ ಬಳಿಗೆ ಬಂದರು. ಮೃದುವಾಗಿ “ಬ್ರಹ್ಮಶ್ರೀ ! ನಿನ್ನ ಅಸಾಧಾರಣ ತಪಸ್ಸಿನಿಂದ ಪ್ರೀತರಾಗಿದ್ದೇವೆ” ಎಂದರು. ಬ್ರಹ್ಮ ದೇವರಿಂದಲೇ ಬ್ರಹ್ಮಶ್ರೀ ಎಂದು ಕರೆಸಿಕೊಂಡ ಕೌಶಿಕನಿಗೆ ತುಂಬಾ ಸಂತೋಷವಾಯಿತು. ವಸಿಷ್ಠರಿಂದಲೂ ಬ್ರಹ್ಮಶ್ರೀ ಎನಿಸಿಕೊಳ್ಳಬೇಕೆಂದು ಅವನ ಆಸೆ. ತನ್ನ ಅಪೇಕ್ಷೆಯನ್ನು ಬ್ರಹ್ಮದೇವರ ಬಳಿ ಹೇಳಿಕೊಂಡ. ಬ್ರಹ್ಮದೇವರು ನಸುನಕ್ಕು
ವಸಿಷ್ಠರನ್ನು ಕರೆಸಿದರು. ವಶಿಷ್ಠರು “ಕೌಶಿಕ ! ನೀನು ಬ್ರಹ್ಮಶ್ರೀ ಯಾದೆ” ಎಂದು ಹೇಳಿ ಸ್ನೇಹದಿಂದ ಅವನನ್ನು ಅಪ್ಪಿಕೊಂಡರು. ಕೌಶಿಕ ಅಂದಿನಿಂದ ವಿಶ್ವಾಮಿತ್ರನಾದ.
ದಶರಥನ ಆಸ್ಥಾನಕ್ಕೆ ಬಂದ ಮಹರ್ಷಿಯ ಕಥೆ ಇದು.
Follow Karunadu Today for more Stories like this
Click here to Join Our Whatsapp Group
