ರಾಮ ಲಕ್ಷ್ಮಣರು ಸ್ನಾನ ಸಂಧ್ಯಾ ವಂದನೆಗಳು ಮುಗಿದ ನಂತರ ವಿಶ್ವಮಿತ್ರರ ಬಳಿಗೆ ಹೋದರು. ವಿಶ್ವಮಿತ್ರರ ಸುತ್ತಲು ಅನೇಕ ಋಷಿಗಳು ನೆರೆದಿದ್ದರು. ಯಾಗದ ಯಶಸ್ಸಿನಿಂದಾಗಿ ವಿಶ್ವಮಿತ್ರರ ಕಾಂತಿ ಇಮ್ಮಡಿಸಿತ್ತು. ಅವರು ಅಗ್ನಿಯಂತೆ ಪ್ರಜ್ವಲಿಸುತ್ತಿದ್ದರು. ರಾಮ ಲಕ್ಷ್ಮಣರು ಅವರಿಗೆ ನಮಸ್ಕರಿಸಿದರು. ವಿಶ್ವಾಮಿತ್ರರು ಸ್ನೇಹ ಭಾವದಿಂದ ಮುಗುಳ್ನಗುತ್ತಾ “ರಾಮ !ಸದ್ಯಕ್ಕೆ ನಮ್ಮ ಇಲ್ಲಿನ ಕೆಲಸ ಮುಗಿಯಿತು. ಇಲ್ಲಿಂದ ನಾವು ಹೊರಡೋಣ ಇನ್ನೊಂದು ಕಾರ್ಯ ಮುಗಿಸಿಕೊಂಡು ಆ ನಂತರ ಅಯೋಧ್ಯೆಗೆ ಹಿಂದಿರುಗಬಹುದು.

ಮಿಥಿಲಾ ಎಂಬ ರಾಜ್ಯವಿದೆ. ಅದನ್ನು ಜನಕ ಮಹಾರಾಜನು ಆಳುತ್ತಿದ್ದಾನೆ. ಅವನು ಒಂದು ಯಾಗವನ್ನು ಮಾಡುತ್ತಿದ್ದಾನೆ. ಆ ಯಾಗಕ್ಕೆ ನಮ್ಮನ್ನು ಕರೆದಿರುವರು. ನಾವೆಲ್ಲರೂ ಅಲ್ಲಿಗೆ ಹೋಗೋಣ. ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುವುದಕ್ಕೆ ಒಂದು ಕಾರಣವೂ ಇದೆ. ಜನಕ ಮಹಾರಾಜನ ಬಳಿ ಒಂದು ಅದ್ಭುತವಾದ ಧನಸ್ಸು ಇದೆ. ಅದು ಶಿವಾಧನಸ್ಸು. ಅದರ ಹೆಸರು ಸುನಾಭ. ಜನಕ ಪೂರ್ವಜರು ಯಜ್ಞವೊಂದನ್ನು ಮಾಡಿದಾಗ ಸುಪ್ರೀತರಾದ ದೇವತೆಗಳು ಅದನ್ನು ಅವರಿಗೆ ಕೊಟ್ಟರು. ಆ ಧನುಸ್ಸಿಗೆ ಜನಕ ಮಹಾರಾಜ ಪ್ರತೀ ದಿನ ಪೂಜೆ ಸಲ್ಲಿಸುತ್ತಾನೆ. ಅಪರಿಮಿತವಾದ ಶಕ್ತಿಯುಳ್ಳ ಆ ಧನಸ್ಸನ್ನು ಎತ್ತುವುದಕ್ಕೆ ಇದುವರೆಗೂ ಯಾರಿಗೂ ಸಾಧ್ಯವಾಗಿಲ್ಲ. ನೀನು ಪರಾಕ್ರಮಿ. ಧನುರ್ವಿದ್ಯೆಯಲ್ಲಿ ಪ್ರವೀಣನಾಗಿದ್ದೀಯ. ನೀನು ಆ ಬಿಲ್ಲನ್ನು ಎತ್ತುವುದಕ್ಕೆ ಪ್ರಯತ್ನ ಪಡಬಹುದು. ಹಾಗೆ ಜನಕ ಮಹಾರಾಜನು ನಡಿಸುವ ಯಜ್ಞವನ್ನು ನೋಡಿದಂತೆಯೂ ಆಗುತ್ತದೆ. ರಾಮನು ಅದಕ್ಕೆ ಸಂತೋಷದಿಂದ ಒಪ್ಪಿಕೊಂಡ ಎಲ್ಲರೂ ಮಿಥಿಲೆಯ ಕಡೆಗೆ ಹೊರಟರು.

ವಿಶ್ವಮಿತ್ರರೊಡಗೂಡಿ ಉತ್ತರ ದಿಕ್ಕಿನೆಡೆಗೆ ಬೆಳೆಸಿದರು. ಆ ದಿನವೆಲ್ಲ ಅವರು ಬಹಳ ದೂರ ನಡೆದರು. ಸಂಜೆಯ ಹೊತ್ತಿಗೆ ಶೋಣಾ ಎಂಬ ನದಿಯ ತೀರವನ್ನು ಸೇರಿದರು. ಸುಂದರವಾಗಿ ಸಂಭ್ರಮದಿಂದ ಹರಿಯುತ್ತಿದ್ದ ಆ ನದಿಯನ್ನು ಕಂಡು ಎಲ್ಲರಿಗೂ ಹರ್ಷವಾಯಿತು. ನದಿಯಲ್ಲಿ ಸ್ನಾನ ಮಾಡಿ ಆಯಾಸ ಪರಿಹರಿಸಿ ಕೊಂಡರು. ಅಲ್ಲಿಯೇ ಉಳಿದುಕೊಂಡರು. ರಾಮ ಲಕ್ಷ್ಮಣರಿಗೆ ಆ ಸ್ಥಳದ ಮಹಿಮೆಯನ್ನು ತಿಳಿಯಬೇಕೆಂಬ ಕುತೂಹಲ ಉಂಟಾಯಿತು. ವಿಶ್ವಮಿತ್ರರು ಆ ದೇಶದ ಕಥೆಯನ್ನು ರಾಮ ಲಕ್ಷ್ಮಣರಿಗೆ ಹೇಳತೊಡಗಿದರು.

ಪೂರ್ವಕಾಲದಲ್ಲಿ ಬ್ರಹ್ಮನ ಮಾನಸಪುತ್ರನಾದ ಕುಶ ಎಂಬ ಮಹಾತ್ಮ ನೊಬ್ಬನಿದ್ದನು. ವೈದರ್ಭಿ ಅವನ ಪತ್ನಿ. ಈ ದಂಪತಿಗಳಿಗೆ ಕುಶಾಂಬ, ಕುಶನಾಭ, ಅಧೂರ್ತ ರಜಸ್ಸು ಮತ್ತು ವಸು ಎಂಬ ನಾಲ್ವರು ಮಕ್ಕಳು ಕೊನೆಯವನಾದ ವಸುವು ಗಿರಿವ್ರಜ ಎಂಬ ಪಟ್ಟಣವನ್ನು ಕಟ್ಟಿದ. ನಾವು ಈಗ ಇರುವುದು ಗಿರಿಪ್ರಜದಲ್ಲಿ ಇದನ್ನು ವಸುವು ಕಟ್ಟಿದ್ದರಿಂದ ಇದಕ್ಕೆ ವಸುಮತಿ ಎಂಬ ಇನ್ನೊಂದು ಹೆಸರೂ ಇದೆ. ಇದು ಮಗದ ರಾಜ್ಯಕ್ಕೆ ರಾಜಧಾನಿ. ಈ ನಗರದ ಸುತ್ತಲೂ ವೈಹಾರ, ವಾರಾಹ, ವೃಷಭ, ಋಷಭಕೂಟ ಮತ್ತು ಚೈತ್ಯಕ ಎಂಬ ಐದು ಪರ್ವತಗಳಿವೆ. ಪವಿತ್ರವಾದ ಶೋಣಾ ನದಿಯು ಈ ಐದೂ ಪರ್ವತಗಳ ಮಧ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ. ಈ ನದಿಯ ಎರಡು ಪಕ್ಕಗಳಲ್ಲಿಯೂ ಹಚ್ಚಿ ಹಸುರಿನ ಗದ್ದೆಗಳೂ, ವನರಾಶಿಗಳೂ ಶೋಭಿಸುತ್ತಿವೆ. ಶೋಣಾ ನದಿಯು ಮಗದ ರಾಜ್ಯದಲ್ಲಿ ಹರಿಯುವುದರಿಂದ ಇದಕ್ಕೆ ಮಾಗಧೀ ಎಂಬ ಹೆಸರೂ ಇದೆ. ಈ ಗಿರಿವ್ರಜವು ಸುಭಿಕ್ಷವಾಗಿದೆ.

ಕುಶನ ಎರಡನೆಯ ಮಗ ಕುಶನಾಭ ಎಂದು ಹೇಳಿದೆನಲ್ಲಾ, ಅವನು ಪ್ರತಾಚೀ ಎಂಬಾಕೆಯನ್ನು ಮದುವೆಯಾದನು. ಅವನು ಪುತ್ರಕಾಮೇಷ್ಠಿ ಯಾಗವನ್ನು ಮಾಡಿ ಗಾಧಿ ಎಂಬ ಮಗನನ್ನು ಪಡೆದನು. ಆ ಗಾಧಿ ರಾಜನೇ ನನ್ನ ತಂದೆ. ಕುಶ ಮಹಾರಾಜನ ವಂಶಸ್ಥನಾದುದರಿಂದ ನನ್ನನ್ನು ಕೌಶಿಕ ಎಂದು ಕರೆಯುತ್ತಾರೆ. ನನ್ನ ಅಕ್ಕ ಸತ್ಯವತಿ. ಅವಳನ್ನು ಋಚೀಕ ಎಂಬ ಮುನಿಗೆ ಕೊಟ್ಟು ವಿವಾಹ ಮಾಡಿದರು. ಮಹಾಪತಿವ್ರತೆ ಯಾದ ಅವಳು ತನ್ನ ಪತಿಯನ್ನು ಹಿಂಬಾಲಿಸಿ ಸ್ವರ್ಗಕ್ಕೆ ಹೋದಳು. ನಂತರ ದೇವತೆಗಳ ಅಪೇಕ್ಷೆಯಂತೆ ನದೀರೂಪದಲ್ಲಿ ಭಲೋಕಕ್ಕೆ ಹಿಂದಿರುಗಿದಳು. ಅದೇ ಕೌಶಿಕೀ ನದಿ, ಆ ಕೌಶಿಕೀ ಮಹಾನದಿಯು ಹಿಮಾಲಯ ಪರ್ವತದ ಬಳಿ ಹರಿಯುತ್ತಿದೆ. ಅದು ಪುಣ್ಯದಕದಿಂದ ಕೂಡಿದ ತುಂಬ ರಮಣೀಯವಾದ ದಿವ್ಯನದಿ, ನನ್ನ ಅಕ್ಕನ ಮೇಲಿನ ಪ್ರೀತಿಯಿಂದ ನಾನು ಹೆಚ್ಚಾಗಿ ಹಿಮಾಲಯದ ತಪ್ಪಲಿನಲ್ಲಿ ಕೌಶಿಕೀ ನದೀ ತೀರದಲ್ಲೇ ವಾಸ ಮಾಡುತ್ತಿರುತ್ತೇನೆ. ಯಾಗಕ್ಕಾಗಿ ಈಗ ಸಿದ್ಧಾಶ್ರಮಕ್ಕೆ ಬಂದೆ. ನಿನ್ನ ಸಹಕಾರದಿಂದ ಯಾಗ ಸಿದ್ದಿಯಾಯಿತು. ಮಿಥಿಲೆಯ ಕೆಲಸ ಮುಗಿದ ನಂತರ ನಾನು ಮತ್ತೆ ಹಿಮಾಲಯಕ್ಕೆ ಹಿಂದಿರುಗುತ್ತೇನೆ” ಎಂದರು. ರಾಮ-ಲಕ್ಷ್ಮಣರು ವಿಶ್ವಾಮಿತ್ರರ ವಂಶದ ಹಿರಿಮೆಯನ್ನು ಕೊಂಡಾಡುತ್ತ ನಿದ್ದೆ ಹೋದರು.

Follow Karunadu Today for more Stories like this

Click here to Join Our Whatsapp Group