ಬಡವ ಮತ್ತು ಶ್ರೀಮಂತ ಎನ್ನುವುದು ಸಾವಿರಾರು ವರ್ಷಗಳಿಂದ ಬಂದಿರುವಂತಹ ಪರಿಕಲ್ಪನೆ. ಕಷ್ಟ ಪಟ್ಟು ದುಡಿದು ಹಣಗಳಿಸಿ ಶ್ರೀಮಂತರಾಗುವ ಜನರು ಒಂದೆಡೆಯಿದ್ದರೆ ಸಾಯುವವರೆಗು ಕಷ್ಟದಲ್ಲಿಯೇ ಮುಳುಗುವ ಜನರು ಇನ್ನೊಂದೆಡೆ ಇರುವರು. ಅದೆಷ್ಟೇ ಶ್ರೀಮಂತ ದೇಶವಿದ್ದರು ಕೂಡ ಬಡವರು ಇದ್ದೇ ಇರುತ್ತಾರೆ. ಸಂಪೂರ್ಣವಾಗಿ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಬಡತನದಿಂದ ಹೊರ ಬರಬೇಕೆಂದರೆ ಬಡತನದಲ್ಲಿರುವ ಕುಟುಂಬದ ಸದಸ್ಯರು ಕಷ್ಟ ಪಟ್ಟು ದುಡಿಯಲೆಬೇಕು. ಸರ್ಕಾರವು ಅದೆಷ್ಟೇ ಯೋಜನೆಗಳನ್ನು ಜಾರಿಗೆ ತಂದರು ಕೂಡ ಬಡವನಿಂದ ಶ್ರೀಮಂತನಾಗುವುದು ಆ ಕುಟುಂಬದ ಸದಸ್ಯರು ತೆಗೆದುಕೊಳ್ಳುವ ಒಂದೊಂದು ತೀರ್ಮಾನದ ಮೇಲೆ ನಿಂತಿರುತ್ತದೆ. ಉದಾಹರಣೆಗೆ ನಮ್ಮೆಲ್ಲರ ನೆಚ್ಚಿನ ಅಬ್ದುಲ್ ಕಲಾಂ ಅವರು ಬಡತನದಲ್ಲೇ ಬೆಳೆದವರು ಆದರೆ ಅವರು ಸಾಯುವ ವೇಳೆಗೆ ದೇಶದ ರಾಷ್ಟ್ರಪತಿ ಆದರು. ಇದೇ ರೀತಿ ಬಡತನದಲ್ಲಿ ಬೆಳೆದು ಸಾಯುವ ವೇಳೆಗೆ ಶ್ರೀಮಂತರಾಗಿ ಸತ್ತಿರುವ ಅನೇಕ ಜನರು ಪ್ರಪಂಚದಲ್ಲಿದ್ದಾರೆ. ಹಳ್ಳಿಯಿಂದ ಯಾರೂ ಗೊತ್ತಿರದ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಬಂದು ನೆಲೆಸಿ ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ಹಣ ಸಂಪಾದನೆ ಮಾಡಿರುವ ಜನರು ಅನೇಕರಿದ್ದಾರೆ. ಹೀಗೆ ಹಳ್ಳಿಗಳಿಂದ ಬಂದು ನಗರದಲ್ಲಿ ನೆಲೆಸಿ ತಮ್ಮ ಬುದ್ದಿಶಕ್ತಿಯನ್ನು ಬಳಸಿಕೊಂಡು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿರುವ ಜನರು ನಗರ ಪ್ರದೇಶಗಳಲ್ಲಿ ಸಾಕಷ್ಟು ಇರುವರು. ಇಂದು ನಿಮಗೆ ಹೀಗೆ ಬಡತನದಿಂದ ಬಂದು ಶ್ರೀಮಂತರಾಗಿರುವ ವ್ಯಕ್ತಿಗಳಿಗೆ ನೆಲೆ ನೀಡಿರುವ ಪ್ರಪಂಚದ 10 ನಗರಗಳ ಬಗ್ಗೆ ತಿಳಿಸಿಕೊಡುತ್ತೇನೆ. ಆ ನಗರಗಳು ಪ್ರಪಂಚದಲ್ಲಿಯೇ ಅತಿ ಹೆಚ್ಚುಶ್ರೀಮಂತ ವ್ಯಕ್ತಿಗಳನ್ನು ಹೊಂದಿರುವ ನಗರಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ. ಆ ನಗರಗಳ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

1. ನ್ಯೂಯಾರ್ಕ್

ಪ್ರಪಂಚದಲ್ಲಿಯೇ ಅತಿ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿರುವ ನಗರವೆಂದರೆ ಅದು ಅಮೇರಿಕದ “ನ್ಯೂಯಾರ್ಕ್” ನಗರ. ಬರೋಬ್ಬರಿ 84 ಕೋಟ್ಯಾಧಿಪತಿಗಳು ಇಲ್ಲಿ ವಾಸಿಸುತ್ತಿದ್ದು ಪ್ರಪಂಚ ಕಂಡ ಬೃಹತ್ ಕಂಪನಿಗಳ ಮಾಲೀಕರು, ಅಮೇರಿಕದ ಪ್ರಸಿದ್ದ ರಾಜಕಾರಣಿಗಳು, ಹಾಲಿವುಡ್ ನಟ ನಟಿಯರು, ವ್ಯವಹಾರಸ್ತರು ಹೀಗೆ ಅನೇಕ ಕೋಟ್ಯಾಧಿಪತಿಗಳು ಈ ನಗರದಲ್ಲಿ ನೆಲೆಸಿದ್ದಾರೆ. ಇವರೆಲ್ಲರುಗಳಲ್ಲಿ ಮೊದಲ ಸ್ಥಾನದಲ್ಲಿ ಇರುವುದು 55.5 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ “ಮೈಕಲ್ ಬ್ಲೂಮ್ಬರ್ಗ್” ಅವರು.

2. ಹಾಂಗ್ ಕಾಂಗ್

ಪ್ರಪಂಚದ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾಗಿರುವ ಹಾಂಗ್ ಕಾಂಗ್ ನಲ್ಲಿ ಬರೋಬ್ಬರಿ 79 ಕೋಟ್ಯಾಧಿಪತಿಗಳಿದ್ದು ಏಷ್ಯಾದಲ್ಲಿಯೇ ಇದು ಅತ್ಯಂತ ಶ್ರೀಮಂತ ನಗರವಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಈ ನಗರದಲ್ಲಿರುವ ಜನರು ಸಾಕಷ್ಟು ಹಣಗಳಿಸಿದ್ದಾರೆ. 79 ಕೋಟ್ಯಾಧಿಪತಿಗಳನ್ನು ಹೊಂದಿರುವ ಈ ನಗರದಲ್ಲಿ ಮೊದಲನೆಯ ಸ್ಥಾನದಲ್ಲಿ ಇರುವುದು “ಲಿ ಕಾ ಷಿಂಗ್”.

3. ಮಾಸ್ಕೋ

ಬರೋಬ್ಬರಿ 71 ಕೋಟ್ಯಾಧಿಪತಿಗಳನ್ನು ಹೊಂದಿರುವ ರಷ್ಯಾದ ರಾಜಧಾನಿ ಮಾಸ್ಕೋ ನಗರವು ಆ ದೇಶದ ಶೇಕಡ 80ರಷ್ಟು ಕೋಟ್ಯಾಧಿಪತಿಗಳನ್ನು ಇದೊಂದೇ ನಗರದಲ್ಲಿ ಹೊಂದಿದೆ.

4. ಬೀಜಿಂಗ್

ಚೀನಾದ ರಾಜಧಾನಿ ಬೀಜಿಂಗ್ ನಗರದಲ್ಲಿ 61 ಕೋಟ್ಯಾಧಿಪತಿಗಳಿದ್ದು ಅದರಲ್ಲಿ ಮೊದಲನೆಯ ಸ್ಥಾನದಲ್ಲಿ “ಕ್ರಿಪ್ಟೊ ಕರೆನ್ಸಿ” ಗಳಿಕೆಯಿಂದ ಹೆಸರುವಾಸಿಯಾಗಿರುವ 33 ವರ್ಷದ “ಜಿಹಾನ್ ವು” ಇದ್ದರೆ ಇಂಟರ್ನೆಟ್ ದಿಗ್ಗಜ “ಬೈಟೆನ್ಡೆನ್ಸ್“ ಮಾಲೀಕ “ಜಾಂಗ್ ಇಮಿಂಗ್” ಎರಡನೆಯ ಸ್ಥಾನದಲ್ಲಿದ್ದಾರೆ.

5. ಲಂಡನ್

ಇಂಗ್ಲೆಂಡ್ ದೇಶದ ರಾಜಧಾನಿಯಾದ ಲಂಡನ್ ನಗರದಲ್ಲಿ 55 ಕೋಟ್ಯಾಧಿಪತಿಗಳಿದ್ದು ಅವರುಗಳಲ್ಲಿ ಅರ್ಧಕ್ಕರ್ಧ ಕೋಟ್ಯಾಧಿಪತಿಗಳು ಹೊರ ದೇಶದಿಂದ ಬಂದು ಇಲ್ಲಿ ನೆಲೆಸಿದವರಾಗಿದ್ದಾರೆ. ಶ್ರೀಮಂತ ಹೋಟಲ್ ಗಳನ್ನು ಹೊಂದಿರುವ ಈ ನಗರವು ಭಾರತ, ಐಸ್ಲ್ಯಾಂಡ್, ರಷ್ಯಾ ಹೀಗೆ ಅನೇಕ ದೇಶಗಳಿಂದ ವ್ಯವಹಾರಸ್ತರನ್ನು ತನ್ನೆಡೆಗೆ ಸೆಳೆದುಕೊಂಡಿದೆ.

6. ಶಾಂಗೈ

ವಾಣಿಜ್ಯ ಮತ್ತು ಸರಕು ಸಾಗಾಣಿಕೆಯಿಂದಲೆ ಪ್ರಪಂಚದೆಲ್ಲೆಡೆ ಹೆಸರುವಾಸಿಯಾಗಿರುವ ನಗರ ಚೀನಾದ ವಾಣಿಜ್ಯ ನಗರಿ ಶಾಂಗೈ. ಈ ನಗರದಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಬಂದರು ಇದೆ. ಹೀಗೆ ವಾಣಿಜ್ಯದಿಂದಲೇ ಪ್ರಸಿದ್ದಿ ಹೊಂದಿರುವ ಈ ನಗರದಲ್ಲಿ ಬರೋಬ್ಬರಿ 45 ಕೋಟ್ಯಾಧಿಪತಿಗಳಾಗಿದ್ದಾರೆ.

7. ಸ್ಯಾನ್ ಫ್ರ್ಯಾನ್ಸಿಸ್ಕೋ

ಅಮೇರಿಕದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಹೃದಯ ಭಾಗವಾಗಿರುವ ಈ ನಗರದಲ್ಲಿ ಜಗತ್ತಿನ ಅನೇಕ ಪ್ರಸಿದ್ದ ಕಂಪನಿಗಳಲ್ಲಿ ಒಂದಾಗಿರುವ “ಯೂಬರ್, ಏರ್ ಬಿ ಎನ್ ಬಿ, ಪಿಂಟರೆಸ್ಟ್” ನಂತಹ ದೈತ್ಯ ಕಂಪನಿಗಳು ಸೇರಿದಂತೆ ಇನ್ನೂ ಅನೇಕ ಟೆಕ್ ದಿಗ್ಗಜ ಕಂಪನಿಗಳಿವೆ. ಇನ್ನೂ ಈ ನಗರದಲ್ಲಿ ಬರೋಬ್ಬರಿ 42 ಕೋಟ್ಯಾಧಿಪತಿಗಳಾಗಿದ್ದಾರೆ. ಅಮೇರಿಕದ ಅತ್ಯಂತ ದುಭಾರಿ ನಗರವಾಗಿರುವ ಸ್ಯಾನ್ ಫ್ರ್ಯಾನ್ಸಿಸ್ಕೊದಲ್ಲಿ ಫೇಸ್ಬುಕ್ ಕಂಪನಿಯ ಉಪಸಂಸ್ಥಾಪಕ “ಡಸ್ಟೀನ್ ಮಾಸ್ಕೋವಿಟ್ಜ್” ನೆಲೆಸಿದ್ದು ಈ ನಗರದಲ್ಲಿರುವ ನೆಲೆಸಿರುವ ಅತ್ಯಂತ ಶ್ರೀಮಂತ ವ್ಯಕ್ತಿ ಇವರಾಗಿದ್ದಾರೆ.

8. ಶೆನ್ಜೆನ್

ಹಾಂಗ್ ಕಾಂಗ್ ಗಡಿಭಾಗಕ್ಕೆ ಅಂಟಿಕೊಂಡಿರುವ ಚೀನಾದ ಈ ನಗರದಲ್ಲಿ ಬರೋಬ್ಬರಿ 39 ಕೋಟ್ಯಾಧಿಪತಿಗಳಿದ್ದಾರೆ. ಇದರಲ್ಲಿ ಇರುವ ಎಲ್ಲಾ ಕೋಟ್ಯಾಧಿಪತಿಗಳು ಸ್ವಯಂ ಘೋಷಿತ ಕೋಟ್ಯಾಧಿಪತಿಗಳಾಗಿದ್ದಾರೆ. ಇವರುಗಳಲ್ಲಿ ಮೊದಲ ಸ್ಥಾನದಲ್ಲಿ ಇರುವುದು “ಟೆನ್ಸೆಂಟ್” ಕಂಪನಿಯ ಮಾಲೀಕ “ಮಾ ಹುವಾಟೆಂಗ್”. ಇದಷ್ಟೇ ಅಲ್ಲದೆ ಡ್ರೋನ್ ಗಳನ್ನು ತಯಾರಿಸಿ ಕೋಟ್ಯಾಧಿಪತಿಯಾದ ಪ್ರಸಿದ್ದ ಡ್ರೋನ್ ತಯಾರಿಕೆ ಕಂಪನಿಯಾದ “ಡಿಜೆಐ” ಸಂಸ್ಥಾಪಕ “ಫ್ರ್ಯಾಂಕ್ ವ್ಯಂಗ್” ಕೂಡ ಇದೇ ಊರಿನಲ್ಲಿ ಇರುವುದು.

9. ಸಿಯೋಲ್

ದಕ್ಷಿಣ ಕೋರಿಯಾದ ರಾಜಧಾನಿ “ಸಿಯೋಲ್” ನಗರದಲ್ಲಿ 38 ಕೋಟ್ಯಾಧಿಪತಿಗಳಿದ್ದು ಅದರಲ್ಲಿ ಪ್ರಸಿದ್ದ “ಸ್ಯಾಂಸಂಗ್” ಕಂಪನಿಯ ಮಾಲೀಕ “ಲೀ ಕುನ್ ಹಿ” ಮೊದಲ ಸ್ಥಾನದಲ್ಲಿದ್ದಾರೆ. ಪ್ರಪಂಚದ ಅತ್ಯಂತ ಪ್ರಸಿದ್ದ ಕಾರ್ ತಯಾರಿಕಾ ಕಂಪನಿಯಾದ “ಹುಂಡೈ” ಕೂಡ ಇದೇ ನಗರದಲ್ಲಿದ್ದು ಇದೇ ತರಹ ಅನೇಕ ಪ್ರಸಿದ್ದ ಗೇಮಿಂಗ್ ಕಂಪನಿಗಳು ಕೂಡ ಇಲ್ಲೇ ಇವೆ. ಈ ನಗರವನ್ನು ಕೆಲವು ಜಿಲ್ಲೆಗಳಾಗಿ ವಿಂಗಡಿಸಿದ್ದು ಅದರಲ್ಲಿ “ ಗಂಗಮ್ ಜಿಲ್ಲೆಯು” ಅತ್ಯಂತ ಶ್ರೀಮಂತ ಜಿಲ್ಲೆಯಾಗಿದೆ ಇಲ್ಲಿಯೇ ಅನೇಕ ಶ್ರೀಮಂತ ವ್ಯಕ್ತಿಗಳು ಮತ್ತು ಸೆಲಬ್ರಿಟಿಗಳು ವಾಸಿಸುತ್ತಿದ್ದಾರೆ.

10. ಮುಂಬೈ

ಭಾರತದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ನಗರದಲ್ಲಿ ಒಂದೆಡೆ ಪ್ರಪಂಚದ ಅತ್ಯಂತ ದೊಡ್ಡ “ಸ್ಲಂ” ಇದ್ದರೆ ಇನ್ನೊಂದೆಡೆ ಶ್ರೀಮಂತ ವ್ಯಕ್ತಿಗಳನ್ನು ಹೊಂದಿರುವ ಸ್ಥಳಗಳಿವೆ. ದೊಡ್ಡ ದೊಡ್ಡ ವ್ಯವಹಾರಸ್ತರನ್ನು, ಬಾಲಿವುಡ್ ಸಿನಿಮಾ ರಂಗದವರನ್ನು ಹೊಂದಿರುವ ಈ ಊರಿನಲ್ಲಿ ಒಟ್ಟು 37 ಕೋಟ್ಯಾಧಿಪತಿಗಳಿದ್ದಾರೆ. ಇವರುಗಳಲ್ಲಿ ಮೊದಲ ಸ್ಥಾನದಲ್ಲಿರುವುದು “ಮುಖೇಶ್ ಅಂಬಾನಿ”. 5490 ಕೋಟಿ ಮೊತ್ತದ ಆಸ್ತಿ ಹೊಂದಿರುವ ಇವರು ಆ ನಗರದಲ್ಲಿರುವ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

Follow Karunadu Today for more Interesting Facts & Stories. 

Click here to Join Our Whatsapp Group