ಸಾಗರದ ಮದ್ಯೆ ನೀರಿನ ಅಲೆಗಳನ್ನು ಸೀಳುತ್ತಾ ಸಾಗುವ ಹಡಗಿನಲ್ಲಿ ಒಮ್ಮೆ ಹೋಗಬೇಕು ಅನ್ನುವ ಆಸೆ ಯಾರಿಗೆ ಇರುವುದಿಲ್ಲ ನೀವೇ ಹೇಳಿ. ಜೀವನದಲ್ಲಿ ಒಮ್ಮೆಯಾದರೂ ಈ ರೀತಿ ಬೃಹತ್ ಹಡಗುಗಳಲ್ಲಿ ಹೋಗಬೇಕು ಎಂದು ಅದೆಷ್ಟೋ ಜನರು ಆಸೆ ಹೊಂದಿರುತ್ತಾರೆ. ನಾವೆಲ್ಲ ಸಹಜವಾಗಿ ಟೈಟಾನಿಕ್ ಹಡಗು ಅತ್ಯಂತ ದೊಡ್ಡ ಹಡಗು ಎಂದು ಕೇಳಿದ್ದೇವೆ. ಆದರೆ ಇದಕ್ಕೂ ದೊಡ್ಡದಾದ ಹಡಗುಗಳು ಪ್ರಪಂಚದಲ್ಲಿ ಇದ್ದು ಇಂದು ನಿಮಗೆ ಅವುಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಆ ಬೃಹತ್ ಹಡಗುಗಳ ಒಳಗೆ ಇರುವ ಸುಂದರ ಲೋಕವನ್ನು ನೋಡಿದ ಮೇಲೆ ಖಂಡಿತ ನೀವು ಅಚ್ಚರಿ ಪಡುತ್ತೀರಿ.

1) ಆರ್ ಎಂ ಎಸ್ ಕ್ವೀನ್ ಮೇರಿ 2 – RMS queen mary 2

ಇಂಗ್ಲೆಂಡ್ ದೇಶದ “ಸೌತ್ ಹ್ಯಾಂಪ್ಟನ್ ಮತ್ತು ಅಮೆರಿಕದ ನ್ಯೂಯಾರ್ಕ್” ನಗರದ ಮಧ್ಯೆ ಓಡಾಡುವ ಈ ಬೃಹತ್ ಹಡಗನ್ನು ಇಂಗ್ಲೆಂಡ್ ದೇಶದ ರಾಣಿ “ಕ್ವೀನ್ ಎಲಿಜೆಬೆತ್ 2” ಅವರು 2004ರಲ್ಲಿ ಉದ್ಘಾಟಿಸಿದ್ದರು. ಇದು ಸ್ಟೀಮ್ ಎಂಜಿನ್ ನಿಂದ ಕಾರ್ಯ ನಿರ್ವಹಿಸದೆ “4 ಡೀಸೆಲ್ ಎಂಜಿನ್” ನಿಂದ ಕಾರ್ಯ ನಿರ್ವಹಿಸುತ್ತದೆ. ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಹಡಗಿಗಿದ್ದು ಇದರ ಒಳಗೆ 15 ರೆಸ್ಟೋರೆಂಟ್ ಮತ್ತು ಬಾರ್, 5 ಸ್ವಿಮ್ಮಿಂಗ್ ಪೂಲ್, 1 ಕಸಿನೋ, 1 ಡ್ಯಾನ್ಸ್ ಕೊಠಡಿ, 1 ಚಲನಚಿತ್ರ ಮಂದಿರ ಹಾಗು ಬಾಹ್ಯಾಕಾಶವನ್ನು ವೀಕ್ಷಿಸುವ ತಾರಾಲಯ ಇದೆ. ಬರೋಬ್ಬರಿ 345 ಮೀಟರ್ ಉದ್ದವಿರುವ ಈ ಹಡಗು 2695 ಪ್ರಯಾಣಿಕರನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿದೆ.

2) ಸೀವೈಸ್ ಜಯಂಟ್ – Seawise giant

1975 ರಲ್ಲಿ ಜಪಾನ್ ನಲ್ಲಿ ನಿರ್ಮಾಣವಾದ ಈ ಹಡಗು ಪ್ರಪಂಚದಲ್ಲಿಯೇ ಅತ್ಯಂತ ಉದ್ದವಾದ ಹಡಗು. ಬರೋಬ್ಬರಿ 458.45 ಮೀಟರ್ ಉದ್ದವಿರುವ ಈ ಹಡಗನ ತೂಕವು 657,019 ಟನ್ ತೂಕವಿದೆ. ಈ ಹಡಗು ಅದೆಷ್ಟು ಉದ್ದವಿದೆಯೆಂದರೆ ಪ್ರಪಂಚದಲ್ಲಿರುವ ಕೆಲ ಎತ್ತರದ ಕಟ್ಟಡಗಳಿಗಿಂತ ಈ ಹಡಗಿನ ಉದ್ದ ಜಾಸ್ತಿ ಇದೆ. ಇರಾನ್ ಇರಾಕ್ ಯುದ್ದ ನಡೆಯುವ ವೇಳೆಯಲ್ಲಿ ಇದರ ಮೇಲೆ ಬಿದ್ದ ಬಾಂಬ್ ನಿಂದ ಮುಳುಗಿಹೋಗಿದ್ದ ಈ ಹಡಗನ್ನು ಮತ್ತೆ ಮೇಲಕ್ಕೆತ್ತಿ ಮರುನಿರ್ಮಾಣ ಮಾಡಲಾಯಿತು.

3) ಟಿ.ಐ.ಕ್ಲಾಸ್ ಸೂಪರ್ ಟ್ಯಾಂಕರ್ಸ್ – TI Class Supertankers

ದಕ್ಷಿಣ ಕೋರಿಯಾದ ಹಡಗು ನಿರ್ಮಾಣ ಕಂಪನಿಗಳು ಜೊತೆಗೂಡಿ ನಿರ್ಮಿಸಿರುವ ಈ ಹಡಗಿನ ಉದ್ದ ಬರೋಬ್ಬರಿ 380 ಮೀಟರ್ ಇದೆ. ಅಂದರೆ ಸೀವೈಸ್ ಜಯಂಟ್ ಹಡಗಿನ ಉದ್ದಕ್ಕಿಂತ ಸ್ವಲ್ಪ ಕಡಿಮೆ. ಗಂಟೆಗೆ 30.6 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ಈ ಹಡಗು 3,166,353 ಬ್ಯಾರೆಲ್ ತೈಲವನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿದೆ.

4) ಮೇರ್ಸ್ಕ್ ಟ್ರಿಪಲ್ ಇ ಕ್ಲಾಸ್ – Maersk Triple e class

ಬರೋಬ್ಬರಿ 399.2 ಮೀಟರ್ ಉದ್ದವಿರುವ ಈ ಹಡಗು 2011 ರಲ್ಲಿ ಅತ್ಯಂತ ಉದ್ದವಾದ ಹಡಗು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ದೊಡ್ಡ ದೊಡ್ಡ ಧಾರಕ(Container) ಗಳನ್ನು ಹೊತ್ತೋಯ್ಯುವ ಸಾಮರ್ಥ್ಯ ಹೊಂದಿರುವ ಈ ಹಡಗು ಒಮ್ಮೆಲೇ 23 ಸಾಲುಗಳಲ್ಲಿ ಅಂದರೆ 18 ಸಾವಿರ ಧಾರಕ(Container) ಗಳನ್ನು ಹೊತ್ತೊಯ್ಯಬಲ್ಲದು. ಗಂಟೆಗೆ 43 ಕಿಲೋಮೀಟರ್ ವೇಗದಲ್ಲಿ ಚಲಿಸುವ ಈ ಹಡಗಿನಲ್ಲಿರುವ ಎಂಜಿನ್ ಅನ್ನು ವಿಶೇಷವಾಗಿ ಮಾಡಲಾಗಿದ್ದು ಆ ಎಂಜಿನ್ ಒಂದರ ತೂಕವೇ 2300 ಟನ್ ಇದೆ.

5) ಸಿಯೆಸ್ಸಿಎಲ್ ಗ್ಲೋಬ್ – Cscl globe

“ಸಿಯೆಸ್ಸಿಎಲ್” ಅಂದರೆ ಚೀನಾ ಶಿಪ್ಪಿಂಗ್ ಕಂಟೈನರ್ ಲೈನ್ಸ್, ಈ ಹಡಗನ್ನು ಕೊಂಡುಕೊಂಡಿರುವ ಕಂಪನಿ ಇದು. 2014 ರಿಂದ ಕಾರ್ಯ ನಿರ್ವಹಿಸುತ್ತಿರುವ ಈ ಹಡಗು ಬರೋಬ್ಬರಿ 19,100 ಧಾರಕ(Container) ಗಳನ್ನು ಹೊತ್ತೊಯ್ಯಬಲ್ಲದು. ಇದನ್ನು ದಕ್ಷಿಣ ಕೊರಿಯಾದ ಪ್ರಸಿದ್ದ ಕಂಪನಿಯಾದ “ಹುಂಡೈ” ನಿರ್ಮಾಣ ಮಾಡಿದೆ. ಬರೋಬ್ಬರಿ 400 ಮೀಟರ್ ಉದ್ದ, 60 ಮೀಟರ್ ಅಗಲವಿರುವ ಈ ಹಡಗು ಗಂಟೆಗೆ 41 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

6) ಓಯಾಸಿಸ್ ಆಫ್ ಸೀಸ್ – Oasis of the seas

ಪ್ರಪಂಚದಲ್ಲಿರುವ ಅತ್ಯಂತ ದೊಡ್ಡ “ವಿಹಾರ ನೌಕೆ(cruise ship)” ಗಳಲ್ಲಿ ಈ ಹಡಗು ಕೂಡ ಒಂದು. “ರಾಯಲ್ ಕೆರೆಬಿಯನ್ ಇಂಟರ್ನೇಷನಲ್” ಮಾಲೀಕತ್ವದ ಈ ಹಡಗನ್ನು ಬರೋಬ್ಬರಿ 1.4 ಬಿಲಿಯನ್ ಡಾಲರ್ ಹಣ ಖರ್ಚು ಮಾಡಿ ನಿರ್ಮಿಸಲಾಗಿದೆ. 361 ಮೀಟರ್ ಉದ್ದ, 72 ಮೀಟರ್ ಎತ್ತರವಿರುವ ಈ ಹಡಗು ಗಂಟೆಗೆ 41 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. 18 ಅಂತಸ್ತಿನ ಈ ಹಡಗಿನಲ್ಲಿ 7000 ಜನರು ಒಮ್ಮೆಲೇ ಪ್ರಯಾಣಿಸಬಹುದು. ಈ ಬೃಹತ್ ಹಡಗಿನ ಒಳಗೆ 2742 ಕೋಣೆಗಳಿದ್ದು ಶಾಪಿಂಗ್ ಮಾಲ್ ಗಳು, ಚಲನ ಚಿತ್ರ ಮಂದಿರಗಳು, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಆಟವಾಡಲು ಬಾಸ್ಕೆಟ್ ಬಾಲ್ ಕ್ರೀಡಾಂಗಣ ಕೂಡ ಇದೆ.

Follow Karunadu Today for more Interesting Facts & Stories. 

Click here to Join Our Whatsapp Group