ನೀವು ಸಾಕಷ್ಟು ಜನರನ್ನು ನೋಡಿರುತ್ತೀರಿ, ಅರ್ಥವಿಲ್ಲದೆ ಸರಿಯಾಗಿ ತಿಳಿದುಕೊಳ್ಳದೆ ಬೇರೆಯವರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದು ಅವರ ಕೆಲಸವಾಗಿಬಿಟ್ಟಿರುತ್ತದೆ. ನಮಗೆ ತಿಳಿಯದೇ ಅಥವ ಯೋಚಿಸದೆ ಬೇರೆಯವರ ಬಗ್ಗೆ ಸುಮ್ಮನೆ ಮಾತನಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಕಥೆಯೇ ಉದಾಹರಣೆ.
ಒಮ್ಮೆ ಒಬ್ಬ ವಯಸ್ಸಾದ ವ್ಯಕ್ತಿಯೊಬ್ಬ ತನ್ನ ಮನೆಯ ಪಕ್ಕ ಇರುವ ಯುವಕನು ಒಬ್ಬ ಕಳ್ಳ ಎಂದು ಗಾಳಿ ಸುದ್ದಿ ಹರಡಿಸಿದ, ಈ ಸುಳ್ಳು ಸುದ್ದಿ ಎಷ್ಟರ ಮಟ್ಟಿಗೆ ಹಬ್ಬಿತ್ತೆಂದರೆ ಪೊಲೀಸರು ಬಂದು ಆ ಯುವಕನನ್ನು ಬಂಧಿಸಿದರು. ಕೆಲವು ದಿನಗಳ ನಂತರ ಆ ಯುವಕ ನಿರಪರಾಧಿ ಎಂದು ಗೊತ್ತಾಗಿ ಬಿಡುಗಡೆ ಮಾಡಿದರು.
ಬಿಡುಗಡೆಯಾದ ನಂತರ ಯುವಕನು ನನ್ನ ಮೇಲೆ ಆ ವಯಸ್ಸಾದ ವ್ಯಕ್ತಿಯು ಸುಳ್ಳು ಆರೋಪ ಮಾಡಿದ್ದಾನೆ ಎಂದು ಮೊಕದ್ದಮ್ಮೆ ಹಾಕಿದನು. ಆ ಮುದುಕನನ್ನು ಕೋರ್ಟಿನಲ್ಲಿ ನ್ಯಾಯಮೂರ್ತಿಗಳ ಮುಂದೆ ಹಾಜರು ಪಡಿಸಲಾಯಿತು. ಆಗ ಆ ಮುದುಕನು “ನಾನು ಬರೀ ಟೀಕೆ ಮಾಡಿದೆ ಅಷ್ಟೇ, ಅದರಿಂದ ಯಾರಿಗೂ ಹಾನಿಯಾಗಿಲ್ಲ” ಎಂದು ವಾದಿಸಿದನು.
ವಾದ ಪ್ರತಿವಾದವನ್ನು ಆಲಿಸಿದ ಜಡ್ಜ್, ತೀರ್ಪುನ್ನು ಮಾರನೆಯ ದಿನಕ್ಕೆ ಕಾಯ್ಧಿರಿಸಿ, ಆ ವಯಸ್ಸಾದ ವ್ಯಕ್ತಿಗೆ ಒಂದು ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ನೀನು ಆ ಯುವಕನಿಗೆ ಹೇಳಿದ ಮಾತುಗಳನ್ನು ಬರೆದು ಅವುಗಳನ್ನು ಮನೆಗೆ ಹೋಗುವಾಗ ನಿನ್ನ ಕಾರಿನಿಂದ ಹೊರಗೆ ಬಿಸಾಕಿ ಎಂದರು, ಆ ವಯಸ್ಸಾದ ವ್ಯಕ್ತಿಯು ಜಡ್ಜ್ ಹೇಳಿದ ಹಾಗೆ ಮಾಡಿದನು.
ಮಾರನೇ ದಿನ ಕೋರ್ಟಿನಲ್ಲಿ ಜಡ್ಜ್, “ನಾವು ತೀರ್ಪು ಕೊಡುವುದಕ್ಕಿಂತ ಮೊದಲು ನೀನು ನೆನ್ನೆ ಕಾರಿನಿಂದ ಹೊರಗೆ ಎಸೆದ ಆ ಕಾಗದವನ್ನು ಹುಡುಕಿ ತೆಗೆದುಕೊಂಡು ಬಾ” ಎಂದು ಆ ವಯಸ್ಸಾದ ವ್ಯಕ್ತಿಗೆ ಸೂಚಿಸಿದರು. ಅದಕ್ಕೆ ಆ ಮುದುಕನು ಅದು ಹೇಗೆ ಸಾಧ್ಯ, ಗಾಳಿ ಬೀಸಿ ಅದು ಎಲ್ಲೆಲ್ಲಿಗೋ ಹೋಗಿರುತ್ತದೆ ಅದನ್ನು ಹುಡುಕಿ ತರುವುದು ಅಸಾಧ್ಯ ಎಂದ.
ಆಗ ನ್ಯಾಯಮೂರ್ತಿಗಳು, ಹೇಗೆ ನೀನು ಎಸೆದ ಕಾಗದವನ್ನು ಆರಿಸಿ ತರಲು ಸಾಧ್ಯವಿಲ್ಲವೋ ಅದೇ ರೀತಿ, ಮಾಡಿದ ಟೀಕೆಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ನೀವಾಡುವ ಮಾತುಗಳು ನಿಮಗೆ ಸಾಮಾನ್ಯವಾಗಿರಬಹುದು ಆದರೆ ಅವುಗಳಿಂದ ಬೇರೆಯವರ ವ್ಯಕ್ತಿತ್ವದ ಮೇಲೆ ತುಂಬಾ ದೊಡ್ಡ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ನ್ಯಾಯಮೂರ್ತಿಗಳು ಹೇಳಿದ ಮಾತುಗಳು ನೂರಕ್ಕೆ ನೂರರಷ್ಟು ಸತ್ಯವಲ್ಲವೇ? ನಾವಾಡುವ ಮಾತುಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲ, ಅವು ಬೇರೆಯವರ ವ್ಯಕ್ತಿತ್ವಕ್ಕೆ, ಮರ್ಯಾದೆಗೆ ಮತ್ತು ಘನತೆಗೆ ಕುತ್ತು ತರುತ್ತವೆ. ಕಾಲು ಜಾರಿದರೆ ಸರಿಪಡಿಸಕೊಳ್ಳಬಹುದು ಆದರೆ ನಾಲಿಗೆ ಜಾರಿದರೆ ಸರಿಪಡಿಸಿಕೊಳ್ಳಲಾಗುವುದಿಲ್ಲ ಅಲ್ಲವೆ..?
For more Stories follow Karunadu Today
Click here to Join Our Whatsapp Group
