ನಮಗೆಲ್ಲ ತಿಳಿದ ಹಾಗೆ ಶಬ್ದ ಎನ್ನುವುದು ಎಷ್ಟು ಸುಮದುರವೋ ಅಷ್ಟೇ ಭಯಂಕರ. ನಾವುಗಳು ಕೇಳಿಸಿಕೊಳ್ಳುವ ಶಬ್ದದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಕೂಡ ನಮ್ಮ ಕಿವಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕೆಲವು ಶಬ್ದಗಳನ್ನು ಕೇಳುತ್ತಿದ್ದರೆ ಕೇಳುತ್ತಲೆ ಇರಬೇಕು ಎಂದೆನಿಸಿದರೆ ಮತ್ತೆ ಕೆಲವು ಶಬ್ದಗಳನ್ನು ಕೇಳುತ್ತಿದ್ದರೆ ಗಾಬರಿಯಾಗುತ್ತದೆ. ಶಬ್ದದ ತರಂಗಗಳ ಆಧಾರದ ಮೇಲೆ ನಮ್ಮ ಮೆದುಳು ಕೆಲಸ ಮಾಡುತ್ತದೆ. ಎಲ್ಲೋ ದೂರದಲ್ಲಿ ಕಟ್ಟುತ್ತಿರುವ ಕಟ್ಟಡದ ಶಬ್ದ, ಪಟಾಕಿಯ ಶಬ್ದ ಅಥವ ಜೋರಾಗಿ ಹೋಗುವ ಗಾಡಿಯ ಶಬ್ದ ಅವುಗಳನ್ನು ಕೇಳುತ್ತಿದ್ದರೆ ಕಿವಿಯ ತಮಟೆ ಹರಿದುಹೋದ ಹಾಗೆ ಅನುಭವವಾಗುತ್ತದೆ. ಆದರೆ ಪ್ರಕೃತಿ ಮಾಡುವ ಶಬ್ದದ ಮುಂದೆ ಮಾನವ ಮಾಡುವ ಈ ಶಬ್ದಗಳು ಏನೂ ಅಲ್ಲ. ಮಳೆ ಬರುವ ವೇಳೆ ಗುಡುಗು ಬಂದಾಗ ಆಗುವ ಭಯಂಕರ ಶಬ್ದವನ್ನು ಕೇಳಿದರೆ ಎದೆಯಲ್ಲಿ ಭಯ ಮೂಡುತ್ತದೆ. ಇದೇ ರೀತಿ ಜ್ವಾಲಾಮುಖಿ ಪರ್ವತ ಸ್ಪೋಟವಾಗುವ ವೇಳೆ ಉಂಟಾಗುವ ಶಬ್ದ ಅತ್ಯಂತ ಭಯಾನಕವಾಗಿರುತ್ತದೆ. ಆದರೆ ಇಂದು ನಾನು ನಿಮಗೆ ಒಂದು ಶಬ್ದದ ಕುರಿತು ಹೇಳಲು ಹೊರಟಿದ್ದು ಆ ಶಬ್ದವು ಕೇವಲ ನಮ್ಮ ಭೂಮಿಯ ಮೇಲೆ ಮಾತ್ರವಲ್ಲದೆ ಸಂಪೂರ್ಣ ಬ್ರಹ್ಮಾಂಡದಲ್ಲಿ ಇದುವರೆಗು ಪತ್ತೆ ಮಾಡಲಾದ ಅತ್ಯಂತ ಭಯಾನಕ ಶಬ್ದಗಳಲ್ಲಿ ಒಂದಾಗಿದೆ. ಬನ್ನಿ ಇನ್ನು ಹೆಚ್ಚು ಸಮಯ ವ್ಯರ್ಥ ಮಾಡದೆ ಬ್ರಹ್ಮಾಂಡದಲ್ಲಿ ಉಂಟಾದ ಆ ಭಯಾನಕ ಶಬ್ದದ ಕುರಿತು ತಿಳಿದುಕೊಳ್ಳೋಣ.

ಬ್ರಹ್ಮಾಂಡದಲ್ಲಿ ಉಂಟಾದ ಅತ್ಯಂತ ಭಯಾನಕ ಶಬ್ದದ ಕುರಿತು ನಿಮಗೆ ತಿಳಿಸಿಕೊಡುವುದಕ್ಕಿಂತ ಮೊದಲು ನಮ್ಮ ಭೂಮಿಯ ಮೇಲೆ ಇದುವರೆಗು ಉಂಟಾದ ಅತ್ಯಂತ ಭಯಾನಕ ಶಬ್ದದ ಕುರಿತು ನಿಮಗೆ ತಿಳಿಸಿಕೊಡುತ್ತೇನೆ. ನಮಗೆಲ್ಲ ತಿಳಿದ ಹಾಗೆ ಇಂಡೋನೇಷ್ಯಾ ದೇಶದಲ್ಲಿ ಅನೇಕ ಜ್ವಾಲಾಮುಖಿ ಪರ್ವತಗಳಿವೆ. ಕೆಲವು ಜ್ವಾಲಾಮುಖಿ ಪರ್ವತಗಳಂತು ಭೂಮಿಯ ಮೇಲೆ ಎಲ್ಲೂ ಇಲ್ಲದ ತರಹ ವಿಚಿತ್ರವಾದ ಜ್ವಾಲಾಮುಖಿಯನ್ನು ಹೊರ ಚಿಮ್ಮುತ್ತವೆ. ಸಹಜವಾಗಿ ಒಂದು ಜ್ವಾಲಾಮುಖಿ ಪರ್ವತ ಸ್ಪೋಟವಾದರೆ ಹೆಚ್ಚು ಶಬ್ದ ಮಾಡುವುದು ಸಾಮಾನ್ಯ ಆದರೆ 1883 ರಲ್ಲಿ ಇಂಡೋನೇಷ್ಯಾದ ಜಾವಾ ಮತ್ತು ಸುಮಾತ್ರ ದ್ವೀಪದ ಬಳಿಯಿರುವ “ಕ್ರಕಟೋವ ಜ್ವಾಲಾಮುಖಿ ಪರ್ವತವು” ಮಾಡಿದ ಶಬ್ದವು ಸಾಮಾನ್ಯವಾದ ಶಬ್ದವಾಗಿರಲಿಲ್ಲ. ಭೂಮಿಯ ಮೇಲೆ ಇದುವರೆಗು ಮಾನವ ಇತಿಹಾಸ ಕಂಡ ಅತ್ಯಂತ ಭಯಾನಕ ಶಬ್ದದಲ್ಲಿ ಅದು ಮೊದಲ ಸ್ಥಾನದಲ್ಲಿದೆ. ಅಷ್ಟೊಂದು ಭೀಕರವಾಗಿತ್ತು ಆ ಶಬ್ದ.

ಆ ಜ್ವಾಲಾಮುಖಿ ಪರ್ವತದಿಂದ ಉಂಟಾದ ಶಬ್ದವು ಅದೆಷ್ಟು ಭೀಕರವಾಗಿತ್ತೆಂದರೆ ಬರೋಬ್ಬರಿ 4000 ಕಿಲೋಮೀಟರ್ ದೂರದಲ್ಲಿರುವ ವ್ಯಕ್ತಿಗೆ ಆ ಶಬ್ದವು ಸ್ಪಷ್ಟವಾಗಿ ಕೇಳಿಸಿತ್ತು. ಅಂದರೆ ರಷ್ಯಾ ದೇಶದಲ್ಲಿ ಸ್ಪೋಟವಾದರೆ ನಮ್ಮ ದೇಶದ ತಳಭಾಗದಲ್ಲಿರುವ ಕನ್ಯಾಕುಮಾರಿಯಲ್ಲಿರುವ ಜನರಿಗೆ ಆ ಶಬ್ದವು ಕೇಳಿಸಿದ ಹಾಗೆ. ಅಕಸ್ಮಾತ್ ಈ ಶಬ್ದ ಉಂಟಾದಾಗ ಆ ಪರ್ವತದ ಸುತ್ತ ಮುತ್ತಲಿನ ಪ್ರದೇಶದಲಲಿ ನೀವು ನಿಂತಿದ್ದಾರೆ ನಿಮ್ಮ ದೇಹವು ಶಬ್ದದ ತೀವ್ರತೆಯಿಂದ ಛಿದ್ರ ಛಿದ್ರವಾಗುತ್ತಿತ್ತು. ಇದರೊಂದಿಗೆ ನೀವೇ ಅರ್ಥ ಮಾಡಿಕೊಳ್ಳಿ ಆ ಶಬ್ದದ ತೀವ್ರತೆ ಅದೆಷ್ಟು ಇತ್ತು ಎಂದು. ಅಂದು ಉಂಟಾದ ಆ ಶಬ್ದದ ತರಂಗಗಳು ಸಂಪೂರ್ಣ ಭೂಮಿಯನ್ನು 4 ಬಾರಿ ಸುತ್ತಿ ಕೆಲವೆಡೆ ಸುನಾಮಿಗಳು ಉಂಟಾಗುವ ಹಾಗೆ ಮಾಡಿ 36,417 ಜನರ ಪ್ರಾಣ ತೆಗೆದುಕೊಂಡಿತ್ತು.
ಭೂಮಿಯ ಮೇಲೆ ಉಂಟಾದ ಅತ್ಯಂತ ಭಯಾನಕ ಶಬ್ದದ ಕುರಿತು ನಿಮಗೆ ತಿಳಿಯಿತು. ಈಗ ಬ್ರಹ್ಮಾಂಡದಲ್ಲಿ ಇದುವರೆಗು ಪತ್ತೆ ಮಾಡಲಾದ ಅತ್ಯಂತ ಭಯಾನಕ ಶಬ್ದದ ಕುರಿತು ತಿಳಿಸಿಕೊಡುತ್ತೇನೆ. ಅದನ್ನು ಕೇಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಿ. ಭೂಮಿಯಿಂದ 240.1 ಮಿಲಿಯನ್ ಜ್ಯೋತಿವರ್ಷಗಳಷ್ಟು ದೂರದಲ್ಲಿ ಇರುವ “ಪರ್ಸಿಯಸ್ ನಕ್ಷತ್ರಪುಂಜದಲ್ಲಿ” ಸಾವಿರಾರು ಆಕಾಶಗಂಗೆಗಳಿವೆ. ಇದನ್ನು ಪರ್ಸಿಯಸ್ ಗ್ಯಾಲಕ್ಸಿ ಕ್ಲಸ್ಟರ್ ಎಂದು ಕರೆಯುತ್ತಾರೆ. ನಮ್ಮ ಬ್ರಹ್ಮಾಂಡದಲ್ಲಿ ಇದುವರೆಗು ಪತ್ತೆಮಾಡಲಾದ ಅತ್ಯಂತ ಬೃಹತ್ ಕ್ಲಸ್ಟರ್ ಗಳಲ್ಲಿ ಇದು ಕೂಡ ಒಂದಾಗಿದೆ. ಇಂತಹ ಬೃಹತ್ ಕ್ಲಸ್ಟರ್ ನಿಂದ ಬಂದ ಶಬ್ದವು ಇದುವರೆಗು ಪತ್ತೆ ಮಾಡಲಾದ ಅತ್ಯಂತ ಭಯಾನಕ ಶಬ್ದವಾಗಿದೆ.

ಈಗ ನಿಮಗೆ ಒಂದು ಪ್ರಶ್ನೆ ತಲೆಯಲ್ಲಿ ಖಂಡಿತ ಮೂಡಿರುತ್ತದೆ. ಅದೇನೆಂದರೆ ಶಬ್ದದ ತರಂಗಗಳು ಅಂತರಿಕ್ಷದಲ್ಲಿ ಚಲಿಸಲು ಸಾಧ್ಯವಿಲ್ಲ, ಹಾಗಿದ್ದರು ಈ ಶಬ್ದವನ್ನು ವಿಜ್ಞಾನಿಗಳು ಹೇಗೆ ಸೆರೆಹಿಡಿದರು ಎಂದು. ಇದಕ್ಕೆ ಉತ್ತರ ಹೇಳುತ್ತೇನೆ ಕೇಳಿ. ಶಬ್ದದ ತರಂಗಗಳು ಅಂತರಿಕ್ಷದಲ್ಲಿ ಚಲಿಸುವುದಿಲ್ಲವೆಂದು ನಮಗೆ ಗೊತ್ತು ಆದರೆ ಶಬ್ದವನ್ನು ಸೃಷ್ಟಿಸುವ object ನ ಶಕ್ತಿಯ ತರಂಗಗಳು ಅಂತರಿಕ್ಷದಲ್ಲಿ ಚಲಿಸಬಲ್ಲವು. ಈ ರೀತಿ ಚಲಿಸಿ ಬಂದ ಶಕ್ತಿಯ ತರಂಗಗಳಿಂದ ವಿಜ್ಞಾನಿಗಳಿಗೆ ಪರ್ಸಿಯಸ್ ಗ್ಯಾಲಕ್ಸಿ ಕ್ಲಸ್ಟರ್ ನಿಂದ ಈ ಶಬ್ದವು ಬರುತ್ತಿದೆ ಎಂದು ತಿಳಿದು ಬಂದಿತು. ಆದರೆ ಸಾವಿರಾರು ಆಕಾಶಗಂಗೆಗಳನ್ನು ಹೊಂದಿರುವ ಪರ್ಸಿಯಸ್ ಗ್ಯಾಲಕ್ಸಿ ಕ್ಲಸ್ಟರ್ ನಲ್ಲಿ ನಿಖರವಾಗಿ ಎಲ್ಲಿಂದ ಬಂದಿವೆ ಎಂದು ಪತ್ತೆ ಮಾಡುತ್ತ ಹೋದ ವಿಜ್ಞಾನಿಗಳಿಗೆ ತಿಳಿದುಬಂದ ಸಂಗತಿ ಏನೆಂದರೆ ಯಾವುದೋ ಒಂದು ಬೃಹತ್ ಸೂಪರ್ ಮಾಸಿವ್ ಬ್ಲ್ಯಾಕ್ ಹೋಲ್ ನಿಂದ ಈ ಶಬ್ದವು ಹೊರ ಬಂದಿದೆ ಎನ್ನುವುದು. ಈ ಶಬ್ದವನ್ನು ಭೂಮಿಯ ಮೇಲೆ ಉಂಟಾದ ಅತ್ಯಂತ ಭಯಾನಕ ಶಬ್ದವಾದ “ಕ್ರಕಟೋವ ಪರ್ವತ ಸ್ಫೋಟದ” ಶಬ್ದಕ್ಕೆ ಹೋಲಿಸಿದ ವಿಜ್ಞಾನಿಗಳಿಗೆ ತಿಳಿದುಬಂದ ಸಂಗತಿ ಏನೆಂದರೆ “ಕ್ರಕಟೋವ ಪರ್ವತ ಸ್ಫೋಟಕ್ಕಿಂತ” ಕೋಟಿ ಪಟ್ಟು ಹೆಚ್ಚು ಶಬ್ದ ಇದಾಗಿದೆ ಎಂದು. ಈ ಶಬ್ದವು 100 ಕೋಟಿ ನಕ್ಷತ್ರಗಳು ಒಮ್ಮೆಲೇ ಸ್ಪೋಟವಾದಾಗ ಸೃಷ್ಟಿಸುವಷ್ಟು ಶಬ್ದವನ್ನು ಹೊಂದಿತ್ತು. ಇದರೊಂದಿಗೆ ನಮ್ಮ ಸಂಪೂರ್ಣ ಬ್ರಹ್ಮಾಂಡದಲ್ಲಿ ಇದುವರೆಗು ಸೆರೆಹಿಡಿಯಲಾದ ಅತ್ಯಂತ ಭಯಾನಕ ಶಬ್ದ ಇದಾಗಿದೆ. ಆದರೆ ಕೆಲವು ವಿಜ್ಞಾನಿಗಳು ಹೇಳುವ ಪ್ರಕಾರ ಎರಡು ಸೂಪರ್ ಮಾಸಿವ್ ಬ್ಲ್ಯಾಕ್ ಹೋಲ್ ಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಉಂಟಾಗುವ ಶಬ್ದವು ಇದಕ್ಕಿಂತ ಹೆಚ್ಚಿರುತ್ತದೆ ಎಂದು. ಆದರೆ ಇದುವರೆಗು ಆ ಶಬ್ದವನ್ನು ಸೆರೆಹಿಡಿಯುವಂತಹ ಉಪಕರಣಗಳನ್ನು ನಾವು ಕಂಡುಹಿಡಿದಿಲ್ಲ. ಆದ್ದರಿಂದ ಪರ್ಸಿಯಸ್ ಗ್ಯಾಲಕ್ಸಿ ಕ್ಲಸ್ಟರ್ ನಲ್ಲಿ ಇರುವ ಸೂಪರ್ ಮಾಸಿವ್ ಬ್ಲ್ಯಾಕ್ ಹೋಲ್ ನಿಂದ ಬಂದ ಶಬ್ದವನ್ನೇ ಬ್ರಹ್ಮಾಂಡದಲ್ಲಿ ಇದುವರೆಗು ಸೆರೆಹಿಡಿಯಲಾದ ಅತ್ಯಂತ ಭಯಾನಕ ಶಬ್ದ ಎಂದು ಪರಿಗಣಿಸಲಾಗಿದೆ.
Follow Karunadu Today for more Interesting Facts & Stories.
Click here to Join Our Whatsapp Group
