ನಮಗೆಲ್ಲ ತಿಳಿದ ಹಾಗೆ ನಮ್ಮ ಭೂಮಿಯು ನಮ್ಮ ಸೌರ ಮಂಡಲದಲ್ಲಿ ಇರುವ ಅತ್ಯಂತ ಸುಂದರ ಗ್ರಹ. ಬೆಟ್ಟ, ಗುಡ್ಡ, ನದಿ, ಸರೋವರಗಳನ್ನು ಹೂಂದಿರುವ ಈ ಸುಂದರವಾದ ಗ್ರಹದಲ್ಲಿ ಅನೇಕ ಜೀವರಾಶಿಗಳು ವಾಸಿಸುತ್ತಿವೆ. ಆದರೆ ನಮ್ಮ ಹಾಗೆ ಬೇರೆ ಗ್ರಹಗಳು ಇರುವವೆ ಎಂದು ಪತ್ತೆ ಮಾಡುತ್ತ ಹೋದ ಮನುಷ್ಯನು ಮೊದಲು ನಮ್ಮ ಸೌರ ಮಂಡಲದಲ್ಲಿರುವ ಗ್ರಹಗಳ ಕುರಿತು ಅಧ್ಯಯನ ಮಾಡತೊಡಗಿದ. ಆಗ ವಿಚಿತ್ರವಾದ ಗ್ರಹಗಳು ಆತನಿಗೆ ಸಿಗತೊಡಗಿದವು. ಕೆಲವು ಗ್ರಹವು ಅತಿ ಹೆಚ್ಚು ತಾಪಮಾನ ಹೊಂದುವ ಮೂಲಕ ನರಕದಂತಿದ್ದರೆ, ಮತ್ತೆ ಕೆಲವು ಗ್ರಹದಲ್ಲಿ ಬೆಳಗ್ಗೆ ಹೆಚ್ಚು ಉಷ್ಣಾಂಶವಿದ್ದರೆ ರಾತ್ರಿಯಾದರೆ ಸಾಕು ಅತಿ ಕಡಿಮೆ ಉಷ್ಣಾಂಶ ಹೊಂದಿರುತ್ತದೆ. ಇಂತಹ ವಿಚಿತ್ರ ಗ್ರಹಗಳನ್ನು ನಮ್ಮ ಸೌರ ಮಂಡಲದಲ್ಲಿ ಕಂಡ ವಿಜ್ಞಾನಿಗಳಿಗೆ ಇಷ್ಟು ದೊಡ್ಡ ಬ್ರಹ್ಮಾಂಡದ ಯಾವುದಾದರು ಒಂದು ಮೂಲೆಯಲ್ಲಿ ನಮ್ಮ ಭೂಮಿಯ ಹಾಗಿರುವ ಒಂದು ಗ್ರಹವಿಲ್ಲವೆ ಎನ್ನುವ ಪ್ರಶ್ನೆ ಮೂಡತೊಡಗಿತು. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ಬಾಹ್ಯಾಕಾಶದಲ್ಲಿ ಗ್ರಹಗಳ ಅನ್ವೇಷಣೆ ಮಾಡತೊಡಗಿದ. ಯಾವಾಗ ಅನ್ವೇಷಣೆ ಮಾಡಲು ಶುರು ಮಾಡಿದನೊ ಆಗ ವಿಚಿತ್ರವಾದ ಗ್ರಹಗಳು ವಿಜ್ಞಾನಿಗಳಿಗೆ ಸಿಗತೊಡಗಿದವು. ಅದೆಷ್ಟು ವಿಚಿತ್ರ ಗ್ರಹಗಳೆಂದರೆ ನಮ್ಮ ಸೌರ ಮಂಡಲದಲ್ಲಿ ಇರುವ ಗ್ರಹಗಳಿಗಿಂತ ತುಂಬಾ ವಿಚಿತ್ರವಾದ ಗ್ರಹಗಳು. ಬನ್ನಿ ಇಂದು ನಿಮಗೆ ಬಾಹ್ಯಾಕಾಶದಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದ ಕೆಲ ವಿಚಿತ್ರ ಗ್ರಹಗಳ ಕುರಿತು ತಿಳಿಸಿಕೊಡುತ್ತೇನೆ. ಆ ಗ್ರಹಗಳ ಕುರಿತು ತಿಳಿದುಕೊಂಡ ಮೇಲೆ ನಿಮಗೆ ಖಂಡಿತ ಅಚ್ಚರಿಯಾಗುತ್ತದೆ.
1) ಸಿ. ಒ. ಆರ್. ಒ. ಟಿ – 7ಬಿ (COROT-7b)

ಭೂಮಿಯಿಂದ 489 ಜ್ಯೋತಿವರ್ಷಗಳಷ್ಟು ದೂರದಲ್ಲಿ ಇರುವ ಈ ಗ್ರಹವು “ಸಿ.ಒ.ಆರ್.ಒ.ಟಿ–7” ಎನ್ನುವ ನಕ್ಷತ್ರದ ಸುತ್ತ ಸುತ್ತುತ್ತಿದೆ. “ಮೊನೊಸೆರೋಸ್ ನಕ್ಷತ್ರಪುಂಜ”ದಲ್ಲಿ ಇರುವ ಈ ಗ್ರಹವು ಅದೆಂತಹ ವಿಚಿತ್ರ ಗ್ರಹವೆಂದರೆ ಇದರ ಒಂದು ಭಾಗವು ಮಾತ್ರ ನಕ್ಷತ್ರದ ಕಡೆ ಮುಖ ಮಾಡಿ ಅದರ ಸುತ್ತ ಸುತ್ತುತ್ತಿದೆ ಹಾಗು ಇದರ ಮತ್ತೊಂದು ಭಾಗವು ಸಂಪೂರ್ಣ ಕತ್ತಲಿನಿಂದ ಕೂಡಿದೆ. ಇದರ ಅರ್ಥ ಹೇಗೆ ನಮ್ಮ ಭೂಮಿಯು ತನ್ನ ಕಕ್ಷೆಯ ಸುತ್ತ ಸುತ್ತುತ್ತ ಸೂರ್ಯನ ಸುತ್ತ ಸುತ್ತುತ್ತದೆ ಹಾಗೆ ಈ ಗ್ರಹವು ಸುತ್ತುವುದಿಲ್ಲ. ಇದಕ್ಕೆ ತನ್ನ ಕಕ್ಷೆ ಇರದ ಕಾರಣ ಕೇವಲ ಒಂದು ಮುಖವನ್ನು ಮಾತ್ರ ತನ್ನ ನಕ್ಷತ್ರವಾದ “ಸಿ.ಒ.ಆರ್.ಒ.ಟಿ–7” ಕಡೆಗೆ ಮುಖ ಮಾಡಿ ಸುತ್ತುತ್ತದೆ. ಇದರ ಪರಿಣಾಮದಿಂದ ಇದರ ಒಂದು ಭಾಗವು ನಮ್ಮ ಸೌರ ಮಂಡಲದಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವ ಗ್ರಹವಾದ ಶುಕ್ರ ಗ್ರಹಕ್ಕಿಂತ 6 ಪಟ್ಟು ಹೆಚ್ಚು ತಾಪಮಾನ ಹೊಂದಿದೆ. ಅಂದರೆ ಬರೋಬ್ಬರಿ 2600 ಡಿಗ್ರೀ ಸೆಲ್ಸಿಯಸ್. ಇನ್ನು ಕತ್ತಲಿನಿಂದ ಆವರಿಸಿರುವ ಮತ್ತೊಂದು ಭಾಗದಲ್ಲಿ ತಾಪಮಾನವು ಅದೆಷ್ಟು ಕಡಿಮೆಯಿದೆಯೆಂದರೆ ಅಕಸ್ಮಾತ್ ಆ ಭಾಗದಲ್ಲಿ ಅಪ್ಪಿ ತಪ್ಪಿಯೂ ನಾವು ಇಳಿದರೆ ಕೆಲವೇ ಕ್ಷಣಗಳಲ್ಲಿ ಹೆಪ್ಪುಗಟ್ಟುತ್ತೇವೆ. ಇದರೊಂದಿಗೆ ಈ ಗ್ರಹವು ಒಂದು ರೀತಿಯಲ್ಲಿ ನರಕದಂತಿದೆ.
2) ಕೆಪ್ಲರ್ – 16ಬಿ (Kepler-16b)

ಭೂಮಿಯ ಮೇಲಿರುವ ಯಾವುದೇ ಜೀವಿ ಅಥವ ವಸ್ತುಗಳ ನೆರಳನ್ನು ನೀವು ಗಮನಿಸಬಹುದು. ಕೇವಲ ಒಂದು ನೆರಳು ಮಾತ್ರ ಇರುತ್ತದೆ. ಇದಕ್ಕೆ ಕಾರಣ ನಮ್ಮ ಭೂಮಿಗೆ ಕೇವಲ ಒಂದು ಸೂರ್ಯನು ಇರುವನು. ಆದರೆ ಭೂಮಿಯಿಂದ 200 ಜ್ಯೋತಿವರ್ಷಗಳಷ್ಟು ದೂರದಲ್ಲಿ ಕೆಪ್ಲರ್ 16ಬಿ ಎನ್ನುವ ಗ್ರಹವಿದ್ದು ಆ ಗ್ರಹದ ಮೇಲೆ ಅಕಸ್ಮಾತ್ ನೀವುಗಳು ಹೋದರೆ ನಿಮಗೆ ಎರಡು ನೆರಳುಗಳು ಇರುವುದನ್ನು ಕಾಣಬಹುದಾಗಿದೆ. ಇದಕ್ಕೆ ಕಾರಣ ಆ ಗ್ರಹವು ಎರಡು ನಕ್ಷತ್ರಗಳ ಸುತ್ತ ಸುತ್ತುತ್ತದೆ. ಹೌದು ಇದು ನಿಮಗೆ ಅಚ್ಚರಿ ಎಂದೆನಿಸಿದರು ಕೂಡ ಸತ್ಯ. ನಮ್ಮ ಬ್ರಹ್ಮಾಂಡದಲ್ಲಿ ಕೆಲವು ಸೌರ ಮಂಡಲಗಳಿದ್ದು ಅದರಲ್ಲಿ ಕೇವಲ ಒಂದು ನಕ್ಷತ್ರವಲ್ಲದೆ ಎರಡೆರಡು ನಕ್ಷತ್ರಗಳು ಇವೆ. ಈ ರೀತಿ ಎರಡೆರಡು ನಕ್ಷತ್ರಗಳನ್ನು ಹೊಂದಿರುವ ಸೌರ ಮಂಡಲಗಳಿಗೆ ಬೈನರಿ ಸೋಲಾರ್ ಸಿಸ್ಟಂ ಎಂದು ಕರೆಯುತ್ತಾರೆ. ಇನ್ನು ವಿಜ್ಞಾನಿಗಳು ಹೇಳುವ ಪ್ರಕಾರ ಬಾಹ್ಯಾಕಾಶದಲ್ಲಿ ಕೆಲವು ಸೌರ ಮಂಡಲಗಳಿದ್ದು ಅವುಗಳು ಮೂರು ಸೂರ್ಯಗಳನ್ನು ಹೊಂದಿವೆ. ಅದೇನೇ ಹೇಳಿ ಇಂತಹ ವಿಚಿತ್ರವಾದ ಸೌರ ಮಂಡಲದಲ್ಲಿ ಇರುವ ಕೆಪ್ಲರ್ 16ಬಿ ಗ್ರಹಕ್ಕೆ ನಾವು ಹೋದರೆ ಅಲ್ಲಿ ನಮ್ಮ ಎರಡೆರಡು ನೆರಳುಗಳನ್ನು ಕಾಣಬಹುದಾಗಿದೆ.
3) ಗ್ಲಿಯಿಸ್ – 1214ಬಿ (Gliese -1214b)

ಭೂಮಿಯಿಂದ 42 ಜ್ಯೋತಿವರ್ಷಗಳಷ್ಟು ದೂರದಲ್ಲಿರುವ ಈ ಗ್ರಹದಲ್ಲಿ ಕೇವಲ ನೀರೇ ತುಂಬಿಕೊಂಡಿದ್ದು ಇದನ್ನು ನೋಡುತ್ತಿದ್ದರೆ ಈ ಗ್ರಹವು ನೀರಿನಿಂದಲೆ ಮಾಡಲ್ಪಟ್ಟಿದೆ ಎಂದೆನಿಸುತ್ತದೆ. ಈ ಗ್ರಹವು ಜಿ.ಜೆ.1214 ನಕ್ಷತ್ರದ ಸುತ್ತ ಸುತ್ತುತ್ತಿದ್ದು ನೂರಾರು ಕಿಲೋಮೀಟರ್ ಆಳದವರೆಗು ನೀರನ್ನು ಇದು ಹೊಂದಿದೆ. ಅಂದರೆ ನಮ್ಮ ಸಮುದ್ರ ಇರುವ ಆಳಕ್ಕಿಂತ ಹೆಚ್ಚು ಆಲವನ್ನು ಈ ಗ್ರಹದ ಮೇಲಿರುವ ನೀರು ಹೊಂದಿದೆ. ಡಿಸೆಂಬರ್ 16,2009 ರಂದು ಪತ್ತೆ ಮಾಡಲಾದ ಈ ಗ್ರಹದ ವಾತಾವರಣದಲ್ಲಿ ಇತ್ತೀಚೆಗೆ ಮೋಡಗಳು ಕೂಡ ಇರುವುದನ್ನು ನಾಸಾ ಪತ್ತೆ ಮಾಡಿದೆ.
4) 55 ಕ್ಯಾಂಕ್ರಿ ಇ – 55 cancri e

ವೃತ್ತಾಕಾರದಲ್ಲಿ ನಮ್ಮ ಭೂಮಿಗಿಂತ ಎರಡು ಪಟ್ಟು ಹೆಚ್ಚು ಮತ್ತು ಸಮೂಹದಲ್ಲಿ 8 ಪಟ್ಟು ದೊಡ್ಡದಿರುವ ಈ ಗ್ರಹವು ಭೂಮಿಯಿಂದ 40 ಜ್ಯೋತಿವರ್ಷಗಳಷ್ಟು ದೂರದಲ್ಲಿದೆ.ಅಂದರೆ 400 ತ್ರಿಲಿಯನ್ ಕಿಲೋಮೀಟರ್ ಗಳಷ್ಟು ದೂರದಲ್ಲಿ. ಈ ಗ್ರಹದ ವಾತಾವರಣದಲ್ಲಿ ಕಾರ್ಬನ್ ಅಂಶ ಹೆಚ್ಚಿರುವುದರಿಂದ ತಾಪಮಾನದ ಜೊತೆ ಕೂಡಿಕೊಂಡು ಇಲ್ಲಿ ವಜ್ರದ ಮಳೆಯಾಗುತ್ತದೆ. ವಿಜ್ಞಾನಿಗಳು ಹೇಳುವ ಪ್ರಕಾರ ಈ ಗ್ರಹದಲ್ಲಿ ಅದೆಷ್ಟು ವಜ್ರವಿದೆಯೆಂದರೆ ಅದನ್ನು ಅಕಸ್ಮಾತ್ ನಾವು ಭೂಮಿಗೆ ತರುವಲ್ಲಿ ಯಶಸ್ವಿಯಾಗಿ ಅದನ್ನು ಮಾರಿದರೆ 27 ನ್ಯಾನೋಲಿಯನ್ಸ್ ಡಾಲರ್ ಹಣವನ್ನು ಗಳಿಸಬಹುದು. ಅಂದರೆ 27 ಸಂಖ್ಯೆಯ ಮುಂದೆ 30 ಸೊನ್ನೆ. ಅಷ್ಟೊಂದು ವಜ್ರ ಈ ಗ್ರಹದ ಮೇಲಿದೆ. ಆದರೆ ಈ ಗ್ರಹಕ್ಕೆ ಹೋಗುವುದು ಅಷ್ಟೊಂದು ಸುಲಭವಲ್ಲ. ಮೊದಲೇ ಹೇಳಿದ ಹಾಗೆ ಈ ಗ್ರಹವು ನಮ್ಮ ಭೂಮಿಗಿಂತ ದೊಡ್ಡದಿದೆ. ಆದ್ದರಿಂದ ಇಲ್ಲಿ ಹೆಚ್ಚು ಗುರುತ್ವಾಕರ್ಷಣೆಯ ಬಲವಿದ್ದು ಅದು ನಿಮ್ಮ ಪ್ರಾಣವನ್ನು ತೆಗೆದುಕೊಳ್ಳುತ್ತದೆ. ಇಷ್ಟೇ ಅಲ್ಲದೆ ಈ ಗ್ರಹವು ಕೂಡ ಸಿ. ಒ. ಆರ್. ಒ. ಟಿ – 7ಬಿ ಗ್ರಹದ ತರಹ ತನ್ನ ನಕ್ಷತ್ರದ ಸುತ್ತ ಒಂದು ಕಡೆ ಮುಖ ಮಾಡಿ ಸುತ್ತುತ್ತಿದ್ದು ಇದರ ಒಂದು ಭಾಗದಲ್ಲಿ ಹೆಚ್ಚು ತಾಪಮಾನ ಇದ್ದರೆ ಮತ್ತೊಂದು ಭಾಗದಲ್ಲಿ ಕಡಿಮೆ ತಾಪಮಾನ ಇದೆ.
5) ಎಚ್.ಡಿ.1897 33 ಬಿ – HD 1897 33b

ಭೂಮಿಯಿಂದ 63 ಜ್ಯೋತಿವರ್ಷಗಳಷ್ಟು ದೂರದಲ್ಲಿರುವ ಈ ಗ್ರಹದ ತುಂಬೆಲ್ಲ ಭಯಾನಕ ಚಂಡಮಾರುತಗಳಿವೆ. ಈ ಗ್ರಹವು ಕೂಡ Tidally Locked ಗ್ರಹವಾಗಿದೆ. ಅಂದರೆ ಸಿ.ಒ.ಆರ್.ಒ.ಟಿ – 7ಬಿ ಮತ್ತು 55 ಕ್ಯಾಂಕ್ರಿ ಇ ಗ್ರಹದ ಹಾಗೆ ಈ ಗ್ರಹದ ಒಂದು ಭಾಗವು ನಕ್ಷತ್ರದ ಕಡೆಗೆ ಮುಖ ಮಾಡಿದ್ದರೆ ಮತ್ತೊಂದು ಭಾಗವು ಕತ್ತಲಿನಿಂದ ಕೂಡಿದೆ. ಆದರೆ ಸಹಜವಾಗಿ ಈ ರೀತಿ ಇರುವ ಗ್ರಹಗಳ ಒಂದು ಭಾಗದಲ್ಲಿ ತಾಪಮಾನ ಹೆಚ್ಚಿದ್ದರೆ ಮತ್ತೊಂದು ಭಾಗದಲ್ಲಿ ತಾಪಮಾನವು ಕಡಿಮೆಯಿರುತ್ತದೆ. ಆದರೆ ಈ ಗ್ರಹದಲ್ಲಿ ಆ ರೀತಿ ಇಲ್ಲ. ನಕ್ಷತ್ರದ ಕಡೆಗೆ ಮುಖ ಮಾಡಿರುವ ಭಾಗದ ತಾಪಮಾನವು 966 ಡಿಗ್ರೀ ಸೆಲ್ಸಿಯಸ್ ಇದ್ದರೆ ಕತ್ತಲಿನಿಂದ ಕೂಡಿರುವ ತಾಪಮಾನವು ಕೂಡ 688 ಡಿಗ್ರೀ ಸೆಲ್ಸಿಯಸ್ ಇದೆ. ಇದಕ್ಕೆ ಕಾರಣ ಈ ಗ್ರಹದ ಮೇಲೆ ಇರುವ ಭಯಾನಕ ಚಂಡಮಾರತುಗಳು. ಒಂದು ಕ್ಷಣಕ್ಕೆ 10 ಕಿಲೋಮೀಟರ್ ವೇಗದಲ್ಲಿ ಚಲಿಸುವಷ್ಟು ಸಾಮರ್ಥ್ಯ ಈ ಗ್ರಹದ ಮೇಲಿರುವ ಚಂಡಮಾರುತಗಳಿವೆ. ಅಂದರೆ ಶಬ್ದದ ವೇಗಕ್ಕಿಂತ 29 ಪಟ್ಟು ಹೆಚ್ಚು ವೇಗ. ಇನ್ನು ಭೋಮಿಯ ಮೇಲೆ ಉಂಟಾಗುವ ಚಂಡಮಾರುತಗಳಿಗೆ ಈ ಗ್ರಹದ ಮೇಲೆ ಉಂಟಾಗುವ ಚಂಡಮಾರುತಕ್ಕೆ ಹೋಲಿಸಿದರೆ ಭೂಮಿಯ ಮೇಲೆ ಇದುವರೆಗು ಉಂಟಾದ ಅತ್ಯಂತ ಬಲಿಷ್ಠ ಚಂಡಮಾರುತವೆಂದರೆ ಅದು 1999 ರಲ್ಲಿ ಅಮೇರಿಕದ “ಒಕ್ಲಹೋಮ” ದಲ್ಲಿ ಆದ ಚಂಡಮಾರುತ. ಈ ಚಂಡಮಾರುತವು ಗಂಟೆಗೆ 484 ಕಿಲೋಮೀಟರ್ ವೇಗದಲ್ಲಿ ಚಲಿಸಿ ಅನೇಕ ಸಾವು ನೋವುಗಳನ್ನು ಅಂದು ಸೃಷ್ಟಿಸಿತ್ತು. ಆದರೆ ಇದನ್ನು ಎಚ್.ಡಿ.1897 33 ಬಿ ಗ್ರಹದ ಮೇಲೆ ಉಂಟಾಗುವ ಚಂಡಮಾರುಗಳಿಗೆ ಹೋಲಿಸಿದರೆ 70 ಪಟ್ಟು ಕಡಿಮೆಯಾಗಿದೆ. ಇದರೊಂದಿಗೆ ನೀವೇ ಅರ್ಥ ಮಾಡಿಕೊಳ್ಳಿ ಅದೆಷ್ಟು ಭಯಾನಕ ಚಂಡಮಾರುತಗಳು ಈ ಗ್ರಹದ ಮೇಲೆ ಇವೆ ಎನ್ನುವುದನ್ನು.
ನೋಡಿದಿರಲ್ಲ, ಇಂತಹ ಅದೆಷ್ಟೋ ವಿಸ್ಮಯಕಾರಿ ಗ್ರಹಗಳು ನಮ್ಮ ಬ್ರಹ್ಮಾಂಡದಲ್ಲಿದ್ದು ಅವುಗಳ ಬಗ್ಗೆ ಅಧ್ಯಯನ ಮಾಡುತ್ತಾ ಹೋದರೆ ನಮ್ಮ ಭೂಮಿಯಂತಹ ಸುಂದರ ಗ್ರಹವು ಎಲ್ಲೂ ಇಲ್ಲದಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ಇಂತಹ ಸುಂದರ ಗ್ರಹವನ್ನು ಮನುಷ್ಯನು ಉಳಿಸಿಕೊಳ್ಳದೆ ನಾಶ ಮಾಡುತ್ತಿದ್ದಾನೆ. ಅದಕ್ಕೆ ಅಲ್ಲವೇ ಹೇಳುವುದು ಒಂದು ವಸ್ತುವಿನ ಬೆಲೆ ಅದು ಇದ್ದಾಗ ಗೊತ್ತಾಗುವುದಿಲ್ಲ ಕಳೆದುಕೊಂಡ ಮೇಲೆಯೇ ಅದರ ಬೆಲೆ ತಿಳಿಯುವುದು ಎಂದು. ನಮ್ಮ ಗ್ರಹಕ್ಕೆ ಮುಂಬರುವ ದಿನಗಳಲ್ಲಿ ಏನಾದರು ತೊಂದರೆಯಾಗಿ ನಾವೆಲ್ಲರು ತೊಂದರೆಯಲ್ಲಿ ಸಿಲುಕಿದಾಗಲೆ ನಮ್ಮ ಭೂಮಿ ತಾಯಿಯ ಬೆಲೆ ಏನು ಎಂದು ನಮಗೆ ತಿಳಿಯುತ್ತದೆ.
