ನೀವೆಲ್ಲಾ ಪ್ರಸಿದ್ದ ಮೊಗ್ಲಿ, ಟಾರ್ಜನ್, ಕನ್ನಡದ ಕಾಡಿನ ರಾಜ ಸಿನಿಮಾ ನೋಡಿರುತ್ತೀರ. ಈ ಚಿತ್ರಗಳಲ್ಲಿ ತೋರಿಸಿರುವುದೇನೆಂದರೆ ಮನುಷ್ಯರಿಗಿಂತ ಪ್ರಾಣಿಗಳೇ ಉತ್ತಮ. ಪುಟ್ಟ ಕಂದಮ್ಮ ಕಾಡಿನ ಒಳಗಡೆ ಪ್ರಾಣಿಗಳ ಕೈಗೆ ಸಿಕ್ಕರೆ ಆ ಪ್ರಾಣಿಗಳು ಅದನ್ನು ತಿನ್ನದೆ ತಮ್ಮ ಮಗುವಿನ ತರಹ ನೋಡಿಕೊಂಡು ಬೆಳೆಸಿ ದೊಡ್ಡವರನ್ನಾಗಿ ಮಾಡಿದಂತಹ ಕಥೆಗಳು ಅವು. ಇದು ಕೇವಲ ಕಥೆ ಅಷ್ಟೇ ನಿಜವಾಗಲು ಸಾದ್ಯವೇ ಇಲ್ಲ ಅಂತ ಅಂದುಕೊಳ್ಳಬೇಡಿ. ಇಂದು ನಾವು ನಿಮಗೆ ಹೇಳ ಹೊರಟಿರುವುದು ಈ ಕಥೆಯು ನಿಜ ಎಂದು ತೋರಿಸಿದ ಸತ್ಯ ಕಥೆಗಳು. ಹೌದು, ಕೆಲವು ಮಕ್ಕಳಿದ್ದಾರೆ ಅವುಗಳು ಚಿಕ್ಕವರಿದ್ದಾಗ ಹಲವು ಕಾರಣದಿಂದ ತಮ್ಮ ಕುಟುಂಬದಿಂದ ದೂರವಾಗಿ ಕಾಡಿನ ಪ್ರಾಣಿಗಳ ಕೈಗೆ ಸಿಕ್ಕು ಬೆಳೆದಿರುವರು. ಇಂದು ನಿಮಗೆ ಆ ಪುಟ್ಟ ಕಂದಮ್ಮಗಳು ಹೇಗೆ ಪ್ರಾಣಿಗಳ ಕೈಗೆ ಸಿಕ್ಕು ಬೆಳೆದು ದೊಡ್ಡವರಾದರು ಎಂದು ವಿವರಿಸುತ್ತೇವೆ ಮುಂದೆ ಓದಿ.
1. ಮರೀನಾ ಚಾಪ್ಮಾನ್ (Marina Chapman)
ಕೊಲಂಬಿಯ ದೇಶದ ಈಕೆ ಐದು ವರ್ಷದವಳಿದ್ದಾಗ ತನ್ನ ಮನೆಯ ಅಂಗಳದಲ್ಲಿ ಆಟ ಆಡುವ ವೇಳೆಯಲ್ಲಿ ಮಕ್ಕಳ ಕಳ್ಳರ ಕೈಯಲ್ಲಿ ಸಿಕ್ಕು ಕಾಡಿನ ಪಾಲಾಗಿದ್ದಳು. ಮನೆಯ ದಾರಿ ತಿಳಿಯದೆ ಕಾಡಿನ ಮದ್ಯೆ ದೊಡ್ಡ ಮರದ ಕೆಳಗೆ ಅಳುತ್ತ ಕುಳಿತಿದ್ದಾಗ ಈಕೆಯ ಅಳುವಿನ ದ್ವನಿ ಕೇಳಿ ಕಾಡಿನಲ್ಲಿದ್ದ ನೂರಾರು ಕೋತಿಗಳು ಈಕೆಯ ಬಳಿ ಬಂದು ತಮ್ಮ ಭಾಷೆಯಲ್ಲಿ ಅವಳಿಗೆ ಸಮಾಧಾನ ಮಾಡಿ ತಿನ್ನಲು ಆಹಾರವನ್ನು ಕೊಡುವುದರ ಜೊತೆಗೆ ತಮ್ಮ ಜೊತೆ ಇರಲು ಜಾಗ ಕೊಟ್ಟು ಕ್ರೂರ ಪ್ರಾಣಿಗಳಿಂದ ರಕ್ಷಿಸಿ ಬೆಳೆಸಿದವು. ಆದರೆ ಸಮಯ ಕಳೆದಂತೆ ಈಕೆ ಮರಳಿ ಮನುಷ್ಯರ ಕೈಗೆ ಸಿಕ್ಕು ಇಂದು ತನ್ನದೇ ಆದ ಕುಟುಂಬದ ಜೊತೆಗೆ ಮನುಷ್ಯಳಾಗಿ ಸಂತೋಷವಾಗಿ ಬದುಕುತ್ತಿದ್ದಾಳೆ.ಕಾಡಿನಲ್ಲಿದ್ದ ದಿನಗಳನ್ನು ನೆನೆದು ತನ್ನ ಕಥೆಯನ್ನು ಜಗತ್ತಿಗೆ ಹೇಳಿಕೊಂಡ ಈಕೆ ಇಂದು ನಾನು ಬದುಕಿರಲು ಕಾರಣ ಕೋತಿಗಳೇ ಎಂದು ಕಣ್ಣೀರು ಇಟ್ಟಿದ್ದಾಳೆ. ಆದರೆ ಆ ಕೋತಿಗಳನ್ನು ಹುಡುಕಿಕೊಂಡು ಮರಳಿ ಕಾಡಿಗೆ ಹೋದರೆ ಬೇಟೆಗಾರರ ಕೈಗೆ ಸಿಕ್ಕು ಅವೆಲ್ಲವು ಸತ್ತು ಹೋಗಿರುವ ಸುದ್ದಿ ತಿಳಿದು ತುಂಬಾ ಬೇಸರ ಪಟ್ಟಿದ್ದಾಳೆ.
2. ಮಾರ್ಕಸ್ ರೋಡ್ರಿಗಜ್ ಪಂಟೋಜ (Marcos Rodriguez Pantoja)
ನಾವೆಲ್ಲಾ ಪ್ರಸಿದ್ದ ಮೊಗ್ಲಿ ಕಥೆಯನ್ನು ಕೇಳಿದ್ದೇವೆ. ನಮ್ಮ ಬಾಲ್ಯದ ದಿನಗಳ ಒಂದು ಸುಂದರ ಕಥೆ ಅದು. ಭಾನುವಾರ ಬಂದರೆ ಸಾಕು ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಆ ಸುಂದರ ಕಥೆಯನ್ನು ನೋಡಲು ಬೆಳಗ್ಗೆ ಬೇಗನೆ ಎದ್ದು ಕೂಡುತ್ತಿದ್ದೆವು. ಆದರೆ ಈ ಕಥೆಯು ನಿಜ ಜೀವನದಲ್ಲಿ ನಡೆದರೆ?. ಹೌದು, ಮಾರ್ಕಸ್ ಜೀವನದಲ್ಲಿ ಈ ಕಥೆಯು ನಿಜವಾಗಿದೆ. ಈತನಿಗೆ ಜನ್ಮ ನೀಡುವಾಗ ಅವನ ತಾಯಿಯು ಸತ್ತು ಹೋದಳು, ತಂದೆಯು ಇನ್ನೊಂದು ಮದುವೆಯಾಗಿ ಬೇರೆ ಊರಿಗೆ ಹೋಗಿಬಿಟ್ಟನು. ಅನಾಥನಾಗಿದ್ದ ಈತನು ಒಬ್ಬ ಕುರಿ ಕಾಯುವ ವ್ಯಕ್ತಿಯ ಕೈಗೆ ಸಿಕ್ಕು ಕುರಿಗಳನ್ನು ನೋಡಿಕೊಳ್ಳುತ್ತ ಬೆಟ್ಟ ಗುಡ್ಡಗಳನ್ನು ಅಲೆಯುತ್ತ ಇದ್ದನು. ಒಂದು ದಿನ ಆ ಕುರಿ ಕಾಯುವ ವ್ಯಕ್ತಿಯು ಆಕಸ್ಮಿಕವಾಗಿ ಸತ್ತು ಹೋದನು. ತನ್ನ ಜೊತೆ ಇರುವ ಒಬ್ಬನನ್ನು ಕಳೆದುಕೊಂಡ ಈತನು ಒಬ್ಬಂಟಿಯಾಗಿ ಇರುವಾಗ ಒಂದು ದಿನ ತೋಳಗಳ ಪರಿಚಯವಾಗಿ ಅವುಗಳ ಜೊತೆಗೆ ಸ್ನೇಹ ಬೆಳೆಸಿ ನಂತರ ಅವುಗಳ ಜೊತೆಗೆ ಇರಲು ಶುರು ಮಾಡಿ ಊರು ಬಿಟ್ಟು ಕಾಡು ಸೇರಿದನು. ಯಾರೂ ಇಲ್ಲದ ಅವನಿಗೆ ಕಾಡಿನಲ್ಲಿರುವ ತೋಳ, ಹಾವುಗಳು, ಕರಡಿಗಳೇ ಕುಟುಂಬವಾಗಿದ್ದವು. ಈ ಪ್ರಾಣಿಗಳ ಜೊತೆ ಇದ್ದು ಈತನು ಕೂಡ ತೋಳಗಳ ಹಾಗೆ ಆಗಿದ್ದನು. ನಡೆದಾಡುವ ರೀತಿಯಿಂದ ಹಿಡಿದು ಎಲ್ಲದರಲ್ಲಿಯೂ ತೋಳದ ರೀತಿ ವರ್ತಿಸುತ್ತಿದ್ದನು. ಆದರೆ ಅದೊಂದು ದಿನ ಪ್ರಾಣಿಗಳ ಬೇಟೆ ಆಡಲೆಂದು ಕಾಡಿಗೆ ಬಂದಿದ್ದ ಬೇಟೆಗಾರರ ಕೈಗೆ ಈತನು ಸಿಕ್ಕು ಮರಳಿ ನಾಡಿಗೆ ಸೇರಿದ್ದಾನೆ. ಕಾಡು ಬಿಟ್ಟು ನಾಡು ಸೇರಿದ ಮೇಲೆ ಮನುಷ್ಯ ಪ್ರಪಂಚದಲ್ಲಿರುವ ಮೋಸ, ಅಸೂಹೆ, ದ್ವೇಷಗಳನ್ನು ಕಂಡು ಸಹಿಸಲಾಗದೆ ಮರಳಿ ತೋಳಗಳ ಜೊತೆ ಇರಲು ಅವುಗಳನ್ನು ಹುಡುಕಿಕೊಂಡು ಅದೆಷ್ಟೋ ಬಾರಿ ಕಾಡಿಗೆ ಹೋಗಿದ್ದಾನೆ, ಆದರೆ ಆ ತೋಳಗಳು ತಾವಿದ್ದ ಜಾಗದಲ್ಲಿ ಇಲ್ಲದಿರುವುದನ್ನು ಕಂಡು ಮರಳಿ ನಾಡಿಗೆ ಬಂದು ಇಂದು ಒಬ್ಬಂಟಿಯಾಗಿ ಬದುಕುತ್ತಿದ್ದಾನೆ.
3. ಬೆಲ್ಲೋ (bello)
ಈತನ ಕಥೆಯು ಹೃದಯ ಮುಟ್ಟುವಂತಿದೆ. ನೈಜೀರಿಯ ದೇಶದ ಈ ಬಾಲಕನು ಒಂದು ವರ್ಷಗಳ ಕಾಲ ಕಾಡಿನಲ್ಲಿರುವ ಚಿಂಪಾಂಜಿಗಳ ಕೈಯಲ್ಲಿ ಬೆಳೆದು ನಂತರ ಮನುಷ್ಯರ ಕೈಯಲ್ಲಿ ಸಿಕ್ಕು ಬದುಕಲು ಹರಸಾಹಸ ಪಟ್ಟಿದ್ದ. ಈತನು ಹುಟ್ಟುತ್ತಲೇ ಬುದ್ದಿಮಾಂದ್ಯನಾಗಿ ಬೆಳೆದ. ಇವನು ಆ ತರಹ ಇರುವುದನ್ನು ನೋಡಿ ಇವನ ತಂದೆ ತಾಯಿಗಳು ಇವನನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದರು. ಕಾಡಿನಲ್ಲಿ ಇವನ ಅಳುವಿನ ಕೂಗು ಚಿಂಪಾಂಜಿಗಳ ಮನಸ್ಸು ಕರಗಿಸಿತ್ತು. ಚಿಂಪಾಂಜಿಗಳ ಜೊತೆಗೆ ಬೆಳೆದ ಈತನು ಅವುಗಳ ಹಾಗೆಯೇ ಆಡತೊಡಗಿದ್ದ. 1996 ರಲ್ಲಿ ಉತ್ತರ ನೈಜೀರಿಯಾದ ಫಾಲ್ಗೊನ್ ಕಾಡಿನಲ್ಲಿ ಬೇಟೆಗಾರರ ಕೈಯಲ್ಲಿ ಸಿಕ್ಕ ಈತನನ್ನು ಕಾಡಿನಿಂದ ನಾಡಿಗೆ ಕರೆತಂದಾಗ ಚಿಂಪಾಂಜಿಗಳ ಹಾಗೆ ವರ್ತಿಸುವುದನ್ನು ಕಂಡು ಊರಿನ ಜನರು ಈತನ ಬಳಿ ಬರಲು ಹೆದರುತ್ತಿದ್ದರು. ಈತನನ್ನು ಮರಳಿ ಮನುಷ್ಯನನ್ನಾಗಿ ಪರಿವರ್ತಿಸಲು ಅದೆಷ್ಟೇ ಕಷ್ಟ ಪಟ್ಟರು ಸಾಧ್ಯವಾಗದೆ ಕೊನೆಗೆ 2005ರಲ್ಲಿ ಪ್ರಾಣಬಿಟ್ಟನು.
4. ವನ್ಯ ಯುದೀನ್ (vanya yudin)
ಪ್ರಪಂಚದಲ್ಲಿ ಕೆಟ್ಟ ತಂದೆ ಇದ್ದರೂ ಕೆಟ್ಟ ತಾಯಿ ಇರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಯುದೀನ್ ಜೀವನದಲ್ಲಿ ಆ ಮಾತು ಸುಳ್ಳಾಯಿತು. ಈತನ ತಾಯಿಯೇ ಇವನ ಪಾಲಿನ ಕೆಟ್ಟ ವ್ಯಕ್ತಿ ಆಗಿದ್ದಳು. ಈತನನ್ನು ಹಲವಾರು ವರ್ಷಗಳ ಕಾಲ ಒಂದು ಪುಟ್ಟ ಕೋಣೆಯಲ್ಲಿ ಕೂಡಿ ಹಾಕಿ ಶಿಕ್ಷೆ ಕೊಡುತ್ತಿದ್ದ ಆ ಮಹಾತಾಯಿ ಈತನಿಗೆ ನರಕವನ್ನೇ ತೋರಿಸಿದ್ದಳು. ಮಾನಸಿಕವಾಗಿ ನೊಂದಿದ್ದ ಇವನಿಗೆ ಆ ಕೋಣೆಯಲ್ಲಿದ್ದ ಪಕ್ಷಿಗಳೇ ಸಮಾಧಾನ ಹೇಳುತ್ತಿದ್ದವು. ಪಕ್ಷಿಗಳ ಜೊತೆಗೆ ವರ್ಷಾನುಗಟ್ಟಲೆ ಬೆರೆತು ಅವುಗಳ ಬಾಷೆಯನ್ನು ಕಲಿತು ಮನುಷ್ಯನು ಆಡುವ ಮಾತುಗಳನ್ನೇ ಮರೆತುಬಿಟ್ಟಿದ್ದನು. ಸಮಯ ಕಳೆದಂತೆ ಈತನು ಕೋಣೆಯ ಒಳಗೆ ಬಂದಿಯಾಗಿರುವ ವಿಷಯ ತಿಳಿದು ಪ್ರಾಣಿ ದಯಾಸಂಗದವರು ಈತನನ್ನು ರಕ್ಷಿಸಿದರು. ಹೊರಬಂದ ಮೇಲೆ ಪಕ್ಷಿಗಳ ಹಾಗೆ ಸದ್ದು ಮಾಡುತ್ತಿದ್ದ ಈತನು ಮನುಷ್ಯನಾಗಿ ಬದಲಾಗಲು ಅನೇಕ ವರ್ಷಗಳನ್ನೇ ತೆಗೆದುಕೊಂಡ. ಈತನ ಒಂದೇ ಒಂದು ಕೂಗಿಗೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಈತನ ಬಳಿ ಬರುತ್ತವೆ.
5. ಜಾನ್ (John ssebunya)
ಅದೊಂದು ದಿನ ತನ್ನ ತಾಯಿಯು ತನ್ನ ತಂದೆಯ ಕೈಯಿಂದ ಹತ್ಯೆಯಾಗುತ್ತಿರುವುದನ್ನು ಕಂಡು ಹೆದರಿ ಮನೆ ಬಿಟ್ಟು ಓಡಿ ಹೋದ ಈತನು ಕಾಡಿನ ಒಳಗಿದ್ದ ಮರದ ಕೆಳಗೆ ಅಳುತ್ತ ಕುಳಿತಿದ್ದ. ಕಾಡಿನ ಒಳಗಿದ್ದ ಕೋತಿಗಳ ಕೈಯಲ್ಲಿ ಸಿಕ್ಕು ಅವುಗಳ ತರಹ ಮರಗಳನ್ನು ಹತ್ತುವುದನ್ನು ಕಲಿತು ಅವುಗಳಲ್ಲಿ ಒಬ್ಬವನಾಗಿದ್ದ. ವರ್ಷಗಳು ಕಳೆದಂತೆ ಈತನು ಹಳ್ಳಿಯ ಜನರ ಕೈಯಲ್ಲಿ ಸಿಕ್ಕು ನಾಡಿಗೆ ಬಂದು ಅಲ್ಲಿ ಪಡಬಾರದ ಕಷ್ಟಗಳನ್ನು ಪಟ್ಟು ಇಂದು ಒಬ್ಬ ಮನುಷ್ಯನಾಗಿ ಬದುಕುತ್ತಿದ್ದಾನೆ.
6. ಒಕ್ಷಾನ ಮಲಾಯ (oxana malaya)
ಉಕ್ರೇನ್ ದೇಶದ ಈ ಬಾಲಕಿಯ ಬಾಲ್ಯವು ತುಂಬಾ ಕೆಟ್ಟದಾಗಿತ್ತು. ಕಲ್ಲಿನ ಹೃದಯದ ಈಕೆಯ ತಂದೆ ತಾಯಿ ಈಕೆಯನ್ನು ಮನೆಯಲ್ಲಿದ್ದ ನಾಯಿಯ ಬೋನಿನ ಒಳಗೆ ಹಾಕಿ ನಾಯಿಗಳ ಜೊತೆ ಇರುವ ಹಾಗೆ ಮಾಡಿದ್ದರು. ನಾಯಿಗಳ ಜೊತೆ ಬೆರೆತು ಅವುಗಳ ಬಾಷೆಯನ್ನು ಅರಿತು ಈಕೆಯೂ ನಾಯಿಯ ಹಾಗೆಯೇ ಆಗಿದ್ದಳು. ಆದರೆ ಕೊನೆಗೊಂದು ದಿನ ಈಕೆಯ ಸುತ್ತ ಮುತ್ತಲಿನ ಮನೆಯವರಿಗೆ ಈ ವಿಷಯ ತಿಳಿದು ರಕ್ಷಿಸಿದರು.
7. ದಿನ ಸನಿಚರ್ (Dina sanichar)
ಈತನು ನಮ್ಮ ದೇಶದಲ್ಲಿರುವ ಸಿಕಾಂದ್ರ ಎನ್ನುವ ಪ್ರದೇಶದಲ್ಲಿ ಸಿಕ್ಕವನು. ಈತನು ಕೂಡ ತೋಳಗಳ ಕೈಯಲ್ಲಿ ಬೆಳೆದವನು. ಈತನನ್ನು ಭಾರತದ ಮೋಗ್ಲಿ ಎಂದು ಕರೆಯುತ್ತಾರೆ. ಬೇಟೆಗಾರರ ಕೈಯಲ್ಲಿ ಸಿಕ್ಕು ಕಾಡಿನಿಂದ ಊರು ಸೇರಿದ ಈತನು ಒಂದು ಅನಾಥ ಮಕ್ಕಳ ಆಶ್ರಮದಲ್ಲಿ ಬೆಳೆದನು. ತಿನ್ನಲು ಕೇವಲ ಮಾಂಸ ಕೇಳುತ್ತಿದ್ದ ಈತನಿಗೆ ಆಶ್ರಮದ ಜನರು ಆಹಾರ ನೀಡಲಾಗದೆ ಉಪವಾಸ ಕೆಡುವುತ್ತಿದ್ದರು. ಸರಿಯಾದ ಆಹಾರ ಸಿಗದೆ ಹಾಗು ನಗರದ ವಾತಾವರಣಕ್ಕೆ ಹೊಂದಿಕೊಳ್ಳದೆ ಕೊನೆಗೆ ಪ್ರಾಣ ತೆತ್ತನು.
Follow Karunadu Today for more Interesting Facts & Stories.
Click here to Join Our Whatsapp Group
