"ಅಧ್ಯಾತ್ಮಿಕ ಕಥೆಗಳು"
“ರಾಮ | ಹಿಂದೊಮ್ಮೆ ಪರಶಿವನು ತನ್ನ ಗಣಗಳೊಂದಿಗೆ ಈ ಸ್ಥಳಕ್ಕೆ ಬಂದಿದ್ದನು. ಇಲ್ಲಿನ ಪ್ರಶಾಂತ ವಾತಾವರಣವನ್ನು ಕಂಡು ಶಂಕರನ ಮನಸ್ಸಿಗೆ ತುಂಬ ಹರ್ಷ ವಾಯಿತು. ಅವನು ಇಲ್ಲಿಯೇ ಸಮಾಧಿಯ ಸ್ಥಿತಿಯಲ್ಲಿ ಕುಳಿತು ತಪಸ್ಸು ಮಾಡ ಲಾರಂಭಿಸಿದ.
ಆ ಸಮಯದಲ್ಲಿ ಲೋಕವನ್ನು ತಾರಕ ಎಂಬ ರಾಕ್ಷಸ ಬಾಧಿಸುತ್ತಿದ್ದ ಈತನು ಪಾರಿಯಾತ ಪರ್ವತದಲ್ಲಿ ತಪಸ್ಸು ಮಾಡಿ ಬ್ರಹ್ಮದೇವರನ್ನು ಒಲಿಸಿಕೊಂಡಿದ್ದ ಅಂದಿನವರೆಗೆ ಅವತರಿಸಿದ್ದ ಯಾವ ದೇವತೆಯಿಂದಲೂ ತನಗೆ ಸಾವು ಬಾರದಂತೆ ವರ ಪಡೆದಿದ್ದ. ಅವನಿಗೆ ಮೂವರು ಮಕ್ಕಳು. ಆ ಮೂವರು ಒಂದೊಂದು ಪುರವನ್ನು ಕಟ್ಟಿಕೊಂಡಿದ್ದರು. ಆದ್ದರಿಂದ ಅವರಿಗೆ ತ್ರಿಪುರರೆಂದು ಹೆಸರು. ತಾರಕನು ತಾನು ಪಡೆದಿದ್ದ ವರದ ಬಲದಿಂದ ಕೊಬ್ಬಿಹೋದ ಲೋಕಕ್ಕೆ ಅಸಾಧ್ಯ ಉಪಟಳ ಕೊಡಲಾರಂಭಿಸಿದನು. ಅವನ ಕಾಟ ತಡೆಯಲಾರದೆ ದೇವತೆಗಳು ಬ್ರಹ್ಮದೇವರ ಮೊರೆ ಹೋದರು.
ಬ್ರಹ್ಮದೇವರು, ” ಈಗಿರುವ ದೇವತೆಗಳಿಂದ ತಾರಕನನ್ನು ಕೊಲ್ಲಲು ಸಾಧ್ಯವಿಲ್ಲ. ಅದಕ್ಕೆ ಹೊಸ ಅವತಾರವೇ ಆಗಬೇಕು. ಅದಕ್ಕಾಗಿ ನಾವು ಪ್ರಯತ್ನಿಸಬೇಕು. ಪರ್ವತ ಗಳ ರಾಜ ಹಿಮವಂತ. ಅವರ ಪತ್ನಿ ಮನೋರಮೆ. ಇವರಿಬ್ಬರ ಮಗಳೇ ಪಾರ್ವತಿ ಆ ಪಾರ್ವತೀಯು ಶಿವನನ್ನೇ ಮದುವೆಯಾಗಬೇಕೆಂದು ನಿಶ್ಚಯಿಸಿದ್ದಾಳೆ. ಪರಶಿವನನ್ನು ಕುರಿತು ಹಿಮಾಲಯ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾಳೆ. ಇತ್ತ ಗಂಗಾ ಮತ್ತು ಸರಯೂ ನದಿಗಳ ಪ್ರದೇಶದಲ್ಲಿ ಶಿವನು ಧ್ಯಾನಾಸಕ್ತನಾಗಿದ್ದಾನೆ. ಈ ಶಿವ ಮತ್ತು ಪಾರ್ವತಿಯರು ಮದುವೆಯಾದರೆ ಅವರಿಂದ ಹೊಸ ದೇವತೆಯ ಜನನವಾಗುತ್ತದೆ. ಆ ದೇವತೆಯು ತಾರಕನನ್ನು ಸಂಹರಿಸುತ್ತಾನೆ ಅದ್ದರಿಂದ ನೀವು ಶಿವ ಮತ್ತು ಪಾರ್ವತಿ ಯರನ್ನು ಒಂದುಗೂಡಿಸುವ ಪ್ರಯತ್ನ ಮಾಡಿ” ಎಂದರು.
“ಧ್ಯಾನಾಸಕ್ತನಾಗಿರುವ ಶಿವನನ್ನು ಎಚ್ಚರಗೊಳಿಸುವುದು ಹೇಗೆ? ಪಾರ್ವತಿಯನ್ನು ಮದುವೆಯಾಗುವಂತೆ ಅವನನ್ನು ಒಪ್ಪಿಸುವವರು ಯಾರು?” ಎಂದು ದೇವತೆಗಳು ಚಿಂತಿತರಾದರು. ಆಗ ಮನ್ಮಥ ತಾನು ಅವರಿಗೆ ಸಹಾಯ ಮಾಡುವುದಾಗಿ ಹೇಳಿದ. ಮನ್ಮಥನು ಕಾಮದೇವತೆ. ಅವನ ಬಳೀ ಹೂವಿನ ಬಿಲ್ಲು- ಬಾಣಗಳಿದ್ದವು. ಆ ಬಾಣ ಗಳಿಂದ ಪೆಟ್ಟು ತಿಂದವರು ಕಾಮಪರವಶರಾಗುತ್ತಿದ್ದರು. ಆದ್ದರಿಂದ ಮನ್ಮಥನಿಗೆ ಕಾಮ ಎಂದೂ ಹೆಸರು. ಮನ್ಮಥನು, “ನೀವು ಹಿಮಪರ್ವತಕ್ಕೆ ಹೋಗಿ ಪಾರ್ವತಿಯ ಬಳಿ ಮಾತನಾಡಿ, ಶಿವನ ಮುಂದೆಯೇ ಸುಳಿದಾಡುತ್ತಿರಬೇಕೆಂದು ಅವಳಿಗೆ ತಿಳಿಸಿ.
ಆ ಸಮಯದಲ್ಲಿ ನಾನು ಶಿವನ ಮೇಲೆ ಹೂವಿನ ಬಾಣ ಬಿಡುತ್ತೇನೆ. ಅವನು ಪಾರ್ವತಿಯ ಮೇಲೆ ಮೋಹಗೊಳ್ಳುವಂತೆ ಮಾಡುತ್ತೇನೆ” ಎಂದ ದೇವತೆಗಳಿಗೆ ಈ ಯೋಜನೆ ಯೇನೋ ಹಿಡಿಸಿತು. ಆದರೆ, “ಶಿವನಿಗೆ ಕೋಪಬಂದರೆ ಹೇಗೆ? ಮನ್ಮಥನು ಶಿವನ ಕೋಪಕ್ಕೆ ತುತ್ತಾದರೆ ಏನು ಗತಿ?” ಎಂದು ಅವರು ಚಿಂತಿಸಿದರು. ಮನ್ಮಥನು, “ಒಂದು ವೇಳೆ ಶಿವನ ಕೋಪದಿಂದ ನಾನು ಮರಣ ಹೊಂದಿದರೂ ಚಿಂತೆಯಿಲ್ಲ ಈಗ ದೇವತೆಗಳಿಗೆ ತಾರಕಾಸುರನಿಂದ ಒದಗಿರುವ ಕಷ್ಟ ನೀಗಬೇಕು. ಆದ್ದರಿಂದ ನನ್ನ ಯೋಜನೆಯಂತೆ ನಡೆದುಕೊಳ್ಳೋಣ” ಎಂದ ದೇವತೆಗಳಿಗೆ ಅವನ ತ್ಯಾಗಮಯ ಗುಣವನ್ನು ಕಂಡು ತುಂಬ ಸಂತೋಷವಾಯಿತು ಬೇರೆ ದಾರಿ ಕಾಣದೆ ಅವನು ಹೇಳಿದ ಪ್ರಕಾರವೇ ಹಿಮಪರ್ವತಕ್ಕೆ ಬಂದರು. ದೇವತೆಗಳು ಪಾರ್ವತಿಯನ್ನು ಕಂಡು ತಮ್ಮ ಯೋಜನೆಯನ್ನು ಅವಳಿಗೆ ತಿಳಿಸಿದರು. ಅವಳ ಸಹಕಾರವನ್ನು ಕೋರಿದರು. ಶಿವನನ್ನು ಮದುವೆಯಾಗುವ ಹಂಬಲದಲ್ಲಿದ್ದ ಪಾರ್ವತಿ ಅವರು ಹೇಳಿದಂತೆ ನಡೆಯಲು ಸಂತೋಷದಿಂದ ಒಪ್ಪಿಕೊಂಡಳು. ಶಿವನು ಸಿದ್ಧರೂಢನಾಗಿದ್ದ ಈ ಸ್ಥಳಕ್ಕೆ ಎಲ್ಲರೂ ಬಂದರು. ಆಗ ವಸಂತ ಋತು. ಅದೇ ತಾನೇ ಗಿಡ- ಮರಗಳು ಚಿಗುರಿದವು. ಕೋಗಿಲೆಗಳು ತುಂಬಿದ ಕಂಠದಿಂದ ಇಂಪಾಗಿ ಗಾನ ಮಾಡುತ್ತಿದ್ದವು. ನವಿಲುಗಳು ಗರಿಗೆದರಿ ನಾಟ್ಯವಾಡುತ್ತಿದ್ದವು ಎಂತಹವರನ್ನೂ ಆಕರ್ಷಿಸುವ ಮನಮೋಹರ ದೃಶ್ಯವನ್ನು ಪ್ರಕೃತಿ ದೇವತೆ ಧರಿಸಿದ್ದಳು. ಶಿವನು ಒಂದು ಬಂಡೆಯ ಮೇಲೆ ಧ್ಯಾನಾಸಕ್ತನಾಗಿ ಕುಳಿತಿದ್ದನು. ಅವನ ಗಂಭೀರ ವ್ಯಕ್ತಿತ್ವವನ್ನು ಕಂಡು ಇತರ ದೇವತೆಗಳಿಗೆ ಅವನ ಮುಂದೆ ನಿಲ್ಲುವ ಧೈರ್ಯವಾಗಲಿಲ್ಲ ಅವರೆಲ್ಲರೂ ಮರಗಳಲ್ಲಿ ಅಡಗಿಕೊಂಡರು ಪಾರ್ವತಿಯು ಶಿವನ ಮುಂದೆ ನಿಂತು ಅವನನ್ನು ಪೂಜಿಸಲಾರಂಭಿಸಿದಳು.
ಕಥೆ ಮುಂದುವರೆಯುದು…
Follow Karunadu Today for more Spiritual Stories
Click here to Join Our Whatsapp Group
