ಅದೊಂದು ಊರಿನಲ್ಲಿ ರಾಮು ಮತ್ತು ರಮೇಶ ಎನ್ನುವ ಇಬ್ಬರು ಸ್ನೇಹಿತರಿದ್ದರು. ರಾಮುವಿಗೆ ರಮೇಶನನ್ನು ಕಂಡರೆ ತುಂಬಾ ಇಷ್ಟವಿತ್ತು. ಅದಕ್ಕೆ ಕಾರಣ ಅವನ ಗುಣ ಕಂಡು ಅಲ್ಲ. ರಮೇಶನ ಮನೆಯ ಹತ್ತಿರ ಇದ್ದ ಒಂದು ಮಾವಿನ ತೋಟ, ಆ ತೋಟದಲ್ಲಿ ಸಿಗುವ ಮಾವಿನ ಹಣ್ಣಿಗೋಸ್ಕರ. ಆದರೆ ರಮೇಶನಿಗೆ ಇದರ ಬಗ್ಗೆ ಗೊತ್ತಿರಲಿಲ್ಲ.ಅವನು ರಾಮುವನ್ನು ತುಂಬಾ ಹಚ್ಚಿಕೊಂಡಿದ್ದ. ಪ್ರತಿ ಸಲ ಅವನು ಮನೆಗೆ ಬಂದಾಗ ಅವನನ್ನು ತುಂಬಾ ಚೆನ್ನಾಗಿ ಸತ್ಕರಿಸುತ್ತಿದ್ದ. ರಾಮುಗೋಸ್ಕರ ಏನನ್ನು ಬೇಕಾದರು ಮಾಡಲು ರಮೇಶನು ಸಿದ್ದನಿದ್ದ.

ಇವನ ಈ ಒಳ್ಳೆಯ ಗುಣವನ್ನು ಪ್ರತೀ ಬಾರಿಯೂ ರಾಮುವು ದುರುಪಯೋಗ ಪಡೆದುಕೊಳ್ಳುತ್ತಿದ್ದ. ಅದೊಂದು ದಿನ ಶಾಲೆಯಲ್ಲಿ ರಾಮುವು ತಾನು ಮಾಡಿದ ತಪ್ಪನ್ನು ರಮೇಶನ ಮೇಲೆ ಹಾಕಿ ಶಿಕ್ಷಕರ ಕಡೆಯಿಂದ ಶಿಕ್ಷೆ ನೀಡಿಸಿದ್ದನು. ಆದರೂ ರಮೇಶನು ರಾಮುವಿನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ. ಅದೊಂದು ದಿನ ರಾಮುವು ರಮೇಶನ ಹತ್ತಿರ ಬಂದು ಇಂದಿಗೆ ನಮ್ಮ ಸ್ನೇಹವು ಶುರುವಾಗಿ ಎರಡು ವರ್ಷಗಳಾದವು ಇಂದಿನ ದಿನವನ್ನು ಖುಷಿಯಿಂದ ಆಚರಿಸೋಣ ಎಂದು ಹೇಳಿದ. ಇದನ್ನು ಕೇಳಿ ರಮೇಶನು ಖಂಡಿತವಾಗಿ ಆಚರಿಸೋಣ ಆದರೆ ಎಲ್ಲಿಗೆ ಹೋಗಿ ಆಚರಿಸೋಣ ಎಂದು ಕೇಳಿದ.

ಇದನ್ನೇ ಕಾಯುತ್ತಾ ಇದ್ದ ರಾಮುವು ನಿಮ್ಮ ಮನೆಯ ಹತ್ತಿರ ಇರುವ ಮಾವಿನ ತೋಟದಲ್ಲಿ ಸಿಹಿಯಾದ ಮಾವಿನ ಹಣ್ಣುಗಳಿವೆ ಅಲ್ಲಿಗೆ ಹೋಗೋಣ ಎಂದ. ಅದಕ್ಕೆ ರಮೇಶನು ಸರಿ ಹೋಗೋಣ ಎಂದು ತಲೆಯಾಡಿಸಿದ. ರಾಮು ಮತ್ತು ರಮೇಶ ಇಬ್ಬರೂ ಮಾವಿನ ತೋಟದ ಬಳಿ ಹೊರಟರು. ಆಗ ರಾಮುವು ಅಯ್ಯೋ ನನಗೆ ಕಾಲು ಹೊಳಕಿತು ಎಂದು ನಾಟಕವಾಡತೊಡಗಿದ. ಅದನ್ನು ಕಂಡ ರಮೇಶನು ತನ್ನ ಸ್ನೇಹಿತನಿಗೆ ಏನೋ ಆಯಿತು ಎಂದು ಹೆದರಿ ಬಾ ನನ್ನ ಹೆಗಲ ಮೇಲೆ ಕುಳಿತುಕೋ ನಿನ್ನನ್ನು ನಾನು ಹೊತ್ತು ಸಾಗುತ್ತೇನೆ ಎಂದು ಹೇಳಿದ.

ಇದನ್ನು ಕೇಳಿದ ಕುತಂತ್ರಿ ರಾಮುವು ಒಳಗೊಳಗೆ ನಗುತ್ತ ರಮೇಶನ ಹೆಗಲ ಮೇಲೆ ಹತ್ತಿದ. ಸ್ವಲ್ಪ ಸಮಯದ ನಂತರ ಇಬ್ಬರೂ ಮಾವಿನ ತೋಟವನ್ನು ತಲುಪಿದರು. ನಂತರ ರಾಮುವು ರಮೇಶನಿಗೆ ನನ್ನನ್ನು ಹೆಗಲ ಮೇಲಿಂದ ಕೆಳಗಿಳಿಸು ಎಂದು ಹೇಳಿದ. ನನಗೆ ಕಾಲು ನೋವಾಗಿದೆ ನಾನು ಕೆಳಗಡೆ ನಿಂತಿರುತ್ತೇನೆ ನೀನು ಮರದ ಮೇಲೆ ಏರಿ ಮಾವಿನ ಹಣ್ಣನ್ನು ಕಿತ್ತು ಕೆಳಗೆ ಬಿಸಾಕು ನಾನು ಅದನ್ನು ಚೀಲದಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದನು. ರಾಮುವಿನ ಮಾತು ಕೇಳಿ ಹಾಗೂ ಅವನ ಮೇಲೆ ಇಟ್ಟಿದ್ದ ನಂಬಿಕೆಯಿಂದ ರಮೇಶನು ಮರದ ಮೇಲೆ ಏರಿದನು. ಒಂದೊಂದೇ ಹಣ್ಣನ್ನು ಕಿತ್ತು ಕೆಳಗಡೆಗೆ ಎಸೆಯಲು ಶುರು ಮಾಡಿದನು.

ರಾಮುವು ಕೆಳಗಡೆ ಬೀಳುತ್ತಿದ್ದ ಹಣ್ಣನ್ನು ಚೀಲದಲ್ಲಿ ತುಂಬುತ್ತಾ ಇದ್ದನು. ಚೀಲವು ಬರ್ತಿ ಆಗುವುದನ್ನೇ ಕಾಯುತ್ತಾ ಇದ್ದ ರಾಮುವು ಬರ್ತಿಯಾಗುತ್ತಿದ್ದಂತೆ ತನ್ನ ನರಿ ಬುದ್ದಿಯನ್ನು ತೋರಿಸಿದನು. ಅಯ್ಯೋ ರಮೇಶ ಅಲ್ಲಿ ಯಾರೋ ಕೈಯಲ್ಲಿ ದೊಣ್ಣೆಯನ್ನು ಹಿಡಿದು ಬರುತ್ತಿದ್ದಾರೆ. ನನಗೆ ಅನ್ನಿಸಿದ ಹಾಗೆ ಅವರು ನಮ್ಮ ಕಡೆಗೆ ಬರುತ್ತಿದ್ದಾರೆ. ಇನ್ನು ನಾವು ಇಲ್ಲಿ ಇರುವುದು ಒಳ್ಳೆಯದಲ್ಲ ಎಂದು ಹೇಳಿ ಚೀಲವನ್ನು ಎತ್ತಿಕೊಂಡು ಓಡಲು ಶುರುಮಾಡಿದನು.

ಅದನ್ನು ಕಂಡು ರಮೇಶನಿಗೆ ಆಶ್ಚರ್ಯವಾಯಿತು. ಇವನಿಗೆ ಕಾಲು ಹೊಳಕಿದೆ ಎಂದು ಅವನನ್ನು ಅಷ್ಟು ದೂರದಿಂದ ನನ್ನ ಹೆಗಲ ಮೇಲೆ ಎತ್ತಿಕೊಂಡು ಬಂದೆ ಆದರೆ ಈಗ ನೋಡಿದರೆ ಜಿಂಕೆಯ ತರಹ ನನ್ನನ್ನು ಬಿಟ್ಟು ಓಡಿ ಹೋಗುತ್ತಿದ್ದಾನೆ, ನಿಜವಾಗಿಯೂ ಇವನಿಗೆ ಕಾಲು ಹೊಳಕಿಲ್ಲ, ಎಲ್ಲವೂ ಇವನು ಆಡಿದ ನಾಟಕ. ಇವನಿಗೆ ಬೇಕಾಗಿದ್ದು ಮಾವಿನ ಹಣ್ಣುಗಳು ಅದಕ್ಕೆ ಇವನು ಇಷ್ಟೊಂದು ದಿವಸ ನನ್ನ ಜೊತೆ ಸ್ನೇಹ ಬೆಳೆಸಿದ್ದಾನೆ ಎಂದು ರಮೇಶನಿಗೆ ಅರಿವಾಗುತ್ತದೆ. ಆದರೆ ಏನು ಮಾಡುವುದು ಅಷ್ಟರಲ್ಲಿ ಮಾವಿನ ತೋಟದ ಮಾಲಿಕನು ರಮೇಶನಿಗೆ ಹಿಗ್ಗಾ ಮುಗ್ಗಾ ತಳಿಸಿದನು.

ಇದರಿಂದ ನಾವು ತಿಳಿಯಬೇಕಾದ ಪಾಠವೇನೆಂದರೆ ಯಾರ ಜೊತೆಯಲ್ಲಾದರು ಸ್ನೇಹ ಬೆಳೆಸುವ ಮುನ್ನ ಎಚ್ಚರವಹಿಸಬೇಕು. ಇಲ್ಲವೆಂದರೆ ರಮೇಶನಿಗೆ ಬಂದ ಸ್ಥಿತಿ ನಮಗೂ ಬರಬಹುದು.

For more Stories follow Karunadu Today

Click here to Join Our Whatsapp Group