ಇಂದು ನಾವು ನಮ್ಮ ದೇಶದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆಂದರೆ  ಅದಕ್ಕೆ ಕಾರಣ ಯಾರು ಗೊತ್ತೇ? ನಮ್ಮ ದೇಶವನ್ನು ಕಾಯುತ್ತಿರುವ ಯೋದರು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಶತ್ರುಗಳ ವಿರುದ್ದ ಹಗಲು ರಾತ್ರಿ ಎನ್ನದೆ ಸೆಣೆಸಾಡುತ್ತಿದ್ದಾರೆ. ಸಾವಿರಾರು ಯೋದರು ತಮ್ಮ ಕುಟುಂಬವನ್ನು ಬಿಟ್ಟು ನಮ್ಮ ನೆಮ್ಮದಿಗೋಸ್ಕರ ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ. ಮದುವೆಗೆ ಇನ್ನೇನು ಸ್ವಲ್ಪ ದಿನಗಳು ಇರುವ ಮುಂಚೆಯೇ ಯೋದನೋರ್ವನು ಮೃತ ಪಟ್ಟ ಎಷ್ಟೋ ಕಥೆಗಳನ್ನು ನೀವು ಸಹಜವಾಗಿ ಕೇಳಿರುತ್ತೀರಿ. ಮದುವೆ ಆಗಿ ಕೆಲವೇ ಕೆಲವು ತಿಂಗಳುಗಳು ಆಗಿರುತ್ತವೆ, ಆದರೆ ಆ ಯೋಧನು ಮೃತಪಟ್ಟಿರುತ್ತಾನೆ. ಇಂತಹ ಅದೆಷ್ಟೋ ಕಥೆಗಳನ್ನು ನೀವು ಕೇಳಿರುತ್ತೀರ. ಅದೇ ತರಹ ಇರುವ ಕಥೆಯೊಂದನ್ನು ನೋಡೋಣ ಬನ್ನಿ.

ಅವರಿಬ್ಬರು ಕಾಲೇಜಿನಲ್ಲಿ ಓದುತ್ತ ಇದ್ದಾಗಿನಿಂದಲೂ ಪ್ರೀತಿಸುತ್ತಿದ್ದರು. ಅವರ ಜೋಡಿಯನ್ನು ನೋಡಿ ಅಸೂಹೆ ಪಡದ ವ್ಯಕ್ತಿಗಳೇ ಇರಲಿಲ್ಲ. ಅವನು ತುಂಬಾ ಆದರ್ಶವಾದಿ. ತಾನು ಹುಟ್ಟಿ ಬೆಳೆದ ದೇಶದ ಸೇವೆ ಮಾಡಬೇಕೆಂದು ಚಿಕ್ಕ ವಯಸ್ಸಿನಿಂದಲೂ ತುಂಬಾ ಆಸೆ ಪಟ್ಟವನು. ಅವನ ಸ್ನೇಹಿತರೆಲ್ಲರು ಡಾಕ್ಟರ್ ಅಥವಾ ಇಂಜಿನಿಯರ್ ಗಳಾಗಬೇಕು ಎನ್ನುವ ಆಸೆ ಹೊಂದಿದ್ದರೆ ಇವನು ಮಾತ್ರ ದೇಶ ಕಾಯುವ ಯೋಧನಾಗಬೇಕು ಎನ್ನುವ ಆಸೆಯನ್ನು ಹೊಂದಿದ್ದ. ಎಲ್ಲಾ ಹುಡುಗಿಯರು ತಮ್ಮ ಹುಡುಗ ಸಿನಿಮಾ ಹೀರೋಗಳ ತರಹ ಅಥವಾ ದೊಡ್ಡ ಕ್ರಿಕೆಟರ್ ಆಗಬೇಕು ಎನ್ನುವ ಕನಸನ್ನು ಹೊಂದಿರುತ್ತಾರೆ. ಆದರೆ ಇವಳು ಮಾತ್ರ ತನ್ನ ಹುಡುಗ ಒಬ್ಬ ಮಹಾನ್ ಯೋಧನಾಗಬೇಕು ಎಂದು ಸದಾ ಅವನ ಕನಸಿಗೆ ಬೆಂಬಲವನ್ನು ನೀಡುತ್ತ ಇದ್ದಳು. ಅವನು ಚಿಕ್ಕವನಿದ್ದಾಗಲೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡವನು. ತಂದೆ ತಾಯಿ ಯಾರೂ ಇಲ್ಲದ ಅವನಿಗೆ ಇವಳೇ ಎಲ್ಲವು ಆಗಿದ್ದಳು. ಅನಾಥಾಶ್ರಮದಲ್ಲಿ ಬೆಳೆದಿದ್ದ ಅವನಿಗೆ ಸರಿಯಾಗಿ ತಿನ್ನಲು ಆಹಾರವಿಲ್ಲದೆ ಎಷ್ಟೋ ಬಾರಿ ನೀರು ಕುಡಿದು ಮಲಗುತ್ತಿದ್ದ.

ಆದರೆ ಯೋಧನಾಗಲು ದಷ್ಟ ಪುಷ್ಟವಾದ ಮೈ ಕಟ್ಟು ಬೇಕಾಗಿರುವ ಕಾರಣ ಅವನು ಕಾಲೇಜಿನ ಸಮಯ ಮುಗಿದ ನಂತರ ಪುಟ್ಟ ಹೋಟೆಲಿನಲ್ಲಿ ಕೆಲಸ ಮಾಡಿ ಬಂದ ಹಣವನ್ನು ಕೂಡಿಟ್ಟುಕೊಂಡು ಪೌಷ್ಟಿಕ ಆಹಾರವನ್ನು ಸೇವಿಸುತ್ತಿದ್ದನು. ಇವನಿಗೆ ಸಹಾಯ ಮಾಡಲೆಂದು ಅವಳೂ ಕೂಡ ಅವನಿಗೆ ಗೊತ್ತಿಲ್ಲದೆ ಕಾಲೇಜು ಮುಗಿದ ನಂತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಬಂದ ಹಣವನ್ನು ಅವನಿಗೆ ನೀಡುತ್ತಿದ್ದಳು. ನನ್ನ ಹುಡುಗನು ದೇಶವನ್ನು ಕಾಯಲೆಂದೇ ಹುಟ್ಟಿದವನು. ಅವನನ್ನು ಒಬ್ಬ ಮಹಾನ್ ಯೋಧನನ್ನಾಗಿ ಮಾಡೇ ಮಾಡುತ್ತೇನೆ ಎಂದು ಅವಳು ಪಣ ತೊಟ್ಟಿದ್ದಳು. ಕೊನೆಗೂ ಅಂದುಕೊಂಡಂತೆ ಅದೊಂದು ದಿನ ಅವನಿಗೆ ಸೇನೆಯಲ್ಲಿ ಕೆಲಸ ಸಿಕ್ಕಿತು. ಆ ದಿನ ಅವರಿಬ್ಬರ ಪಾಲಿಗೆ ಸಂತಸದ ಹಾಗೂ ಹೆಮ್ಮೆಯ ದಿನ. ನನ್ನ ಹುಡುಗನು ತನ್ನ ಜೀವನದ ಗುರಿಯನ್ನು ಕೊನೆಗೂ ಮುಟ್ಟಿದನು ಎನ್ನುವ ಖುಷಿಯಿಂದ ಕುಣಿದಾಡಿದಳು. ಮೊದಲ ಬಾರಿಗೆ ಸೇನೆಯ ಸಮವಸ್ತ್ರದಲ್ಲಿ ಅವನನ್ನು ನೋಡಿದಾಗ “ತುಂಬಾ ಚೆನ್ನಾಗಿ ಕಾಣುತ್ತಿದ್ದೀಯಾ” ಎಂದು ಹೇಳಿ ಪ್ರೀತಿಯಿಂದ ತಬ್ಬಿಕೊಂಡಳು.

ಕಾಲೇಜಿನಲ್ಲಿ ಅವರನ್ನು ನೋಡಿ ಅಸೂಹೆ ಪಡುತ್ತಿದ್ದವರೆಲ್ಲರೂ ಅಂದು ಅವನಿಗೆ ಸಲ್ಯೂಟ್ ಮಾಡಿದರು. “ನಿನ್ನ ಗುರಿಯನ್ನು ಮುಟ್ಟಿದೆ, ಆದರೆ ನನ್ನನ್ನು ಯಾವಾಗ ಮದುವೆ ಮಾಡಿಕೊಳ್ಳುವೆ” ಎಂದು ಅವಳು ನಾಚುತ್ತ ಅವನನ್ನು ಕೇಳಿದಳು. ಅದಕ್ಕೆ ಅವನು “ಆದಷ್ಟು ಬೇಗ ಮಾಡಿಕೊಳ್ಳುವೆ” ಎಂದು ಉತ್ತರ ನೀಡಿ ಅವಳ ಹಣೆಗೆ ಮುತ್ತಿಟ್ಟು ರೈಲಿನಲ್ಲಿ ಹತ್ತಿಕೊಂಡು ದೂರದ ಕಾಶ್ಮೀರಕ್ಕೆ ಹೊರಟು ಹೋದ. ಅವನ ಮುಖವನ್ನು ಅದೇ ಕೊನೆಯ ಬಾರಿಗೆ ನೋಡುತ್ತೇನೆ ಎಂದು ಅವಳು ಕನಸಲ್ಲೂ ಊಹಿಸಿರಲಿಲ್ಲ. ಅವನು ತಿರುಗಿ ಬರುತ್ತಾನೆ, ಬಂದ ನಂತರ ಇಬ್ಬರು ಮದುವೆ ಆಗುತ್ತೇವೆ ಎಂದು ನೂರಾರು ಕನಸನ್ನು ಕಾಣುತ್ತ ಅವಳು ಅವನಿಗೋಸ್ಕರ ಕಾಯುತ್ತ ಕುಳಿತಿದ್ದಳು. ಆದರೆ ವಿದಿಯ ಆಟವೇ ಬೇರೆ ಇತ್ತು. ಹಿಮದ ತೊಪ್ಪಲಿನ ದಟ್ಟ ಕಾಡಿನಲ್ಲಿ ಅಡಗಿದ್ದ ಶತ್ರುಗಳನ್ನು ಸೆದೆಬಡಿಯಲೆಂದು ರಚಿಸಿದ್ದ ವಿಶೇಷ ತಂಡದಲ್ಲಿ ಇವನೂ ಕೂಡ ಇದ್ದನು. ಸೇನೆಗೆ ಸೇರಿದ ನಂತರ ಅದು ಅವನು ಕಾಣುತ್ತಿರುವ ಮೊದಲ “ಸೇನೆಯ ಆಪರೇಷನ್” ಆಗಿತ್ತು. ಹತ್ತು ಜನರ ಆ ವಿಶೇಷ ತಂಡವು ಕಾಡಿನ ಒಳಗಡೆ ನುಗ್ಗಿ ಶತ್ರುಗಳನ್ನು ಸೆದೆಬಡಿಯಲು ಶುರುಮಾಡಿತು. ಶತ್ರುಗಳು ಕೂಡ ತುಂಬಾ ಬಲಶಾಲಿಗಳಾಗಿದ್ದರು.

ಇವರು ಬರುವುದನ್ನೇ ಕಾಯುತ್ತಾ ಕುಳಿತಿದ್ದರು. ಹತ್ತು ಜನರಲ್ಲಿ ಇಬ್ಬರನ್ನು ಕೊಂದು ಉಳಿದವರನ್ನು ಸೆರೆಯಾಗಿ ಇಟ್ಟುಕೊಂಡರು. ಅದರಲ್ಲಿ ಮೂರು ಸೈನಿಕರನ್ನು ಅವನ ಕಣ್ಣಿನ ಮುಂದೆಯೇ ಕತ್ತು ಸೀಳಿ ಸಾಯಿಸಿದರು. ಅದನ್ನು ಕಂಡು ಇವನು ಗಾಬರಿಯಾದ. ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಓಡಲು ಶುರುಮಾಡಿದನು. ಅವನು ಓಡುತ್ತಿರುವುದನ್ನು ಗಮನಿಸಿ ಶತ್ರುಗಳು ಅವನನ್ನು ಬೆನ್ನಟ್ಟಿದರು. ದಟ್ಟ ಕಾಡಿನಲ್ಲಿ ದಾರಿ ಯಾವುದೆಂದು ಗೊತ್ತಿಲ್ಲದೆ ಪ್ರಾಣ ಉಳಿಸಿಕೊಳ್ಳಲು ಎಲ್ಲೆಂದರಲ್ಲಿ ಓಡಿದನು. ತನ್ನ ಬಳಿ ಇದ್ದ ಸ್ಯಾಟಲೈಟ್ ಫೋನ್ ಮುಖಾಂತರ ತನ್ನ ಜನರಲ್ ಗೆ ವಿಷಯವನ್ನು ತಿಳಿಸಿದನು. ಅವನನ್ನು ಹಿಂಬಾಲಿಸುತ್ತಾ ಇದ್ದ ಶತ್ರುಗಳು ದೂರದಿಂದ ಗುಂಡು ಹೊಡೆದರು. ಗುಂಡು ಅವನ ಕೈಗೆ ತಗುಲಿ ಸ್ಯಾಟಲೈಟ್ ಫೋನ್ ಕೆಳಗಡೆ ಬಿದ್ದಿತು. ಕೆಳಗಡೆ ಬಿದ್ದ ಫೋನ್ ಅನ್ನು ಮೇಲಕ್ಕೆ ಎತ್ತಿಕೊಳ್ಳಲಾಗದೆ ಅಲ್ಲಿಂದ ಎದ್ದು ಬಿದ್ದು ಓಡಿದನು. ಅದೇ ಕೊನೆಯ ಬಾರಿಗೆ ಅವನು ಮಾತನಾಡಿದ್ದು.

ಅದಾದ ಮೇಲೆ ಅವನು ಏನಾಗಿದ್ದಾನೆ ಎಂದು ತಿಳಿಯಲೇ ಇಲ್ಲ. ಸ್ವಲ್ಪ ದಿನಗಳ ನಂತರ ಇನ್ನೊಂದು ತಂಡವು ಬಂದು ಸೆರೆಯಾಗಿದ್ದ ಸೈನಿಕರನ್ನು ಶತ್ರುಗಳ ಮುಷ್ಠಿಯಿಂದ ಬಿಡಿಸಿತು. ತಪ್ಪಿಸಿಕೊಂಡಿದ್ದ ಇವನನ್ನು ಎಷ್ಟೇ ಹುಡುಕಿದರೂ ಸಿಗಲಿಲ್ಲ. ಕೆಲವರು ದೊಡ್ಡ ಕಾಡಿನಲ್ಲಿರುವ ಕ್ರೂರ ಮೃಗಗಳಿಗೆ ಸಿಕ್ಕು ಸತ್ತು ಹೋಗಿದ್ದಾನೆ ಎಂದು ಹೇಳಿದರೆ ಇನ್ನು ಕೆಲವರು ಅವನು ಗಾಬರಿಯಲ್ಲಿ ಬೇರೆ ದೇಶದ ಅರಣ್ಯ ಪ್ರದೇಶದ ಒಳಗಡೆ ನುಗ್ಗಿ ಶತ್ರುಗಳ ಕೈಯಲ್ಲಿ ಸೆರೆಯಾಗಿದ್ದಾನೆ ಎಂದು ಹೇಳುತ್ತಾರೆ. ಅವನು ನಿಜವಾಗಿಯೂ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎಂದು ಇವತ್ತಿಗೂ ತಿಳಿದಿಲ್ಲ. ಆದರೆ ಅವಳು ಮಾತ್ರ ಅವನು ಬದುಕಿದ್ದಾನೆ, ನನ್ನನ್ನು ಮದುವೆ ಆಗಲು ಬಂದೇ ಬರುತ್ತಾನೆ ಎಂದು ಕಾಯುತ್ತಾ ಕುಳಿತಿದ್ದಾಳೆ. ಅವಳ ಆ ನಂಬಿಕೆಯು ಅವರಿಬ್ಬರ ಮದ್ಯೆ ಇರುವ ಪ್ರೀತಿಯನ್ನು ತೋರಿಸುತ್ತದೆ.

For more Stories follow Karunadu Today

Click here to Join Our Whatsapp Group